ನಾಸಿಕ್ ( ಮಹಾರಾಷ್ಟ್ರ): 12 ವರ್ಷದ ಬಾಲಕನೊಬ್ಬ ಏಕಾಂಕಿಯಾಗಿ ಚಿರತೆಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ಘಟನೆ ಇಲ್ಲಿನ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ. ಮೆಕ್ಕೆಜೋಳದ ಹೊಲಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ಎಗರಿದ್ದು, ಬಲಗೈಯನ್ನು ಬಲವಾಗಿ ಹಿಡಿದು ಎಳೆದಾಡಿತ್ತು. ಈ ವೇಳೆ ಧೈರ್ಯ ತೋರಿದ ಬಾಲಕ ಚಿರತೆಯಿಂದ ತಪ್ಪಿಸಿಕೊಂಡು ಬಂದಿದ್ದಾನೆ.
ಲಾಕ್ಡೌನ್ನಿಂದಾಗಿ ಶಾಲೆಗೆ ರಜೆ ಇರುವ ಕಾರಣ, ನವೆಂಬರ್ 4ರ ಮಧ್ಯಾಹ್ನದ ವೇಳೆ ಮೆಕ್ಕೆಜೋಳ ಕಟಾವು ಮಾಡಿ ಕುಟುಂಬಸ್ಥರಿಗೆ ಸಹಕರಿಸಲು ಜಮೀನಿಗೆ ಆಗಮಿಸಿದ್ದ. ಈ ವೇಳೆ ಬಲಿಗಾಗಿ ಕಾದು ಕುಳಿತಿದ್ದ ಚಿರತೆ ಬಾಲಕ ಗೌರವ್ನ ಮೇಲೆ ದಾಳಿ ಮಾಡಿದೆ.
ಚಿರತೆ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವಕ ಆದರೆ, ಅದಕ್ಕೆ ಭಯಬೀಳದೆ ತನ್ನ ಇನ್ನೊಂದು ಕೈಯಿಂದ ಚಿರತೆಯ ಗಂಟಲು ಭಾಗಕ್ಕೆ ಗುದ್ದಿರುವುದಾಗಿ ಬಾಲಕ ತಿಳಿಸಿದ್ದಾನೆ. ದಾಳಿಯಲ್ಲಿ ಬಾಲಕ ಗಾಯಗೊಂಡಿದ್ದರೂ, ಒದ್ದಾಡಿ ಚಿರತೆ ಬಾಯಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಗಾಯಗೊಂಡ ಬಾಲಕನ್ನು ನಾಸಿಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅರಣ್ಯ ಇಲಾಖೆಯ ಸಮೀಕ್ಷೆಯ ಪ್ರಕಾರ, ಇಲ್ಲಿನ ದರ್ನಾ, ಗೋಧಾವರಿ ಹಾಗೂ ಕಡವ ನದಿ ತೀರದಲ್ಲಿ 200ಕ್ಕೂ ಹೆಚ್ಚು ಚಿರತೆಗಳಿವೆ. ಈ ಭಾಗದಲ್ಲಿ ಕಬ್ಬು ಹಾಗೂ ಜೋಳ ಹೆಚ್ಚಾಗಿ ಬೆಳೆಯುತ್ತಿದ್ದು, ಆಹಾರ ಹುಡುಕಿ ಜನವಸತಿ ಪ್ರದೇಶಗಳಿಗೆ ಚಿರತೆಗಳು ಆಗಮಿಸುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಸಿಕ್ ಜಿಲ್ಲೆಯ ಹಲವೆಡೆ ಚಿರತೆ ಸೇರಿದಂತೆ ಇತರೆ ಪ್ರಾಣಿಗಳನ್ನ ಹಿಡಿಯಲು ಬೋನ್ ಇಡಲಾಗಿದೆ.