ಬಾರ್ಮರ್( ರಾಜಸ್ಥಾನ):ಜಿಲ್ಲೆಯ ಸಿಣಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಂಚಲನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಥಳಿಸಿ ಮೂತ್ರ ಕುಡಿಸಿರುವ ವಿಡಿಯೋವೊಂದು ಸಖತ್ ವೈರಲ್ ಆಗಿರುವ ಘಟನೆ ತಡವಾಗಿ ಹೊರ ಬಿದ್ದಿದೆ.
ಯುವಕನಿಗೆ ರಾಡ್ಗಳಿಂದ ಥಳಿತದ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿಕೆ ಏನಿದು ಪ್ರಕರಣ:15 ದಿನಗಳ ಹಿಂದೆ ಯುವಕನೊಬ್ಬನಿಗೆ ಕೆಲ ಪುಂಡರು ಕಬ್ಬಿಣದ ರಾಡ್ ಮತ್ತು ಇತರ ವಸ್ತುಗಳಿಂದ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಆ ಯುವಕ ನಡೆದಾಡಲಾಗದಷ್ಟು ಗಂಭೀರವಾಗಿ ಗಾಯಗೊಂಡಿದ್ದನು. ನೀನು ಯಾರನ್ನು ಭೇಟಿ ಮಾಡಲು ಬಂದಿದ್ದೀಯಾ ಎಂದು ಹೇಳಿ ಮತ್ತೆ ಯುವಕನನ್ನು ಥಳಿಸಿ ಮೂತ್ರವನ್ನು ಕುಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಎಲ್ಲ ದೃಶ್ಯವನ್ನು ಸೆರೆ ಹಿಡಿದು ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾರೆ.
ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಪೊಲೀಸರ ಕೈಗೂ ಸೇರಿತ್ತು. ಕೂಡಲೇ ಪೊಲೀಸರು ಯುವಕನ ತಂದೆಯನ್ನು ಭೇಟಿ ಮಾಡಿ ಪ್ರಕರಣವನ್ನು ದಾಖಲಿಸುವಂತೆ ಮನವಿ ಮಾಡಿದ್ದರು.
ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ನನ್ನ ಮೇಲೆ ಕಬ್ಬಿಣ ರಾಡ್ಗಳಿಂದ ಮತ್ತು ಇತರ ವಸ್ತುಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಮೂತ್ರ ಕುಡಿಸಿದ್ದಾರೆ ಎಂದು ಸಂತ್ರಸ್ತ ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಕೆಲ ತಂಡಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ.
ವಿಶೇಷವೆಂದರೆ ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಈ ವಿಷಯ ಬೆಂಕಿ ಜ್ವಾಲೆಯಂತೆ ಹಬ್ಬಿದ್ರೆ ಪೊಲೀಸರಿಗೆ ಹೆಚ್ಚು ತಲೆನೋವಾಗಿ ಪರಿಣಮಿಸುತ್ತದೆ. ಅಲ್ಲದೇ ಈ ಬಗ್ಗೆ ಸರ್ಕಾರಕ್ಕೆ ಉತ್ತರಿಸಲು ಪೊಲೀಸ್ ಇಲಾಖೆಗೆ ಕಷ್ಟವಾಗುತ್ತದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ಸ್ಥಳೀಯರ ಮಾತಾಗಿದೆ.