ಲಖನೌ(ಉತ್ತರ ಪ್ರದೇಶ): ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಗಳಲ್ಲೂ ಕೂಡಾ ಸಾಕಷ್ಟು ಬದಲಾವಣೆಯಾಗುತ್ತಿವೆ. ಬಿಜೆಪಿ ಮೈತ್ರಿಕೂಟದ ಪಕ್ಷವಾದ ಅಪ್ನಾ ದಳಕ್ಕೆ ಸೇರಿದ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಚೌಧರಿ ಅಮರ್ ಸಿಂಗ್ ಮತ್ತು ಆರ್.ಕೆ. ವರ್ಮಾ ರಾಜೀನಾಮೆ ನೀಡಿದ್ದು, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಮೈತ್ರಿ ತೊರೆದ ಇಬ್ಬರೂ ಶಾಸಕರು ಯೋಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಹಿಂದುಳಿದವರ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಚೌಧರಿ ಅಮರ್ ಸಿಂಗ್ ಸಮಾಜವಾದಿ ಪಕ್ಷದ ಟಿಕೆಟ್ ಪಡೆದು ಸಿದ್ಧಾರ್ಥನಗರದ ಶೋಹರತ್‌ಗಢ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಪ್ರತಾಪಗಢದ ಜಿಲ್ಲೆಯ ವಿಶ್ವನಾಥ್ ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುವ ಮತ್ತೊಬ್ಬ ಅಪ್ನಾ ದಳದ ಶಾಸಕ ಆರ್.ಕೆ. ವರ್ಮಾ ಕೂಡಾ ಪಕ್ಷವನ್ನು ತೊರೆದು, ಸಮಾಜವಾದಿ ಪಕ್ಷವನ್ನು ಸೇರುವುದಾಗಿ ಘೋಷಿಸಿದ್ದಾರೆ.
10 ಮಂದಿ ಬಿಜೆಪಿ ಶಾಸಕರು ಗುಡ್ಬೈ: ಮಂಗಳವಾರದಿಂದ 10 ಬಿಜೆಪಿ ಶಾಸಕರು ಬಿಜೆಪಿ ತೊರೆದಿದ್ದಾರೆ. ಮೊದಲಿಗೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ್ದು, ಅದಾದ ನಂತರ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಆಪ್ತರಾದ ಭಗವತಿ ಸಾಗರ್, ರೋಷನ್ ಲಾಲ್ ವರ್ಮಾ ಮತ್ತು ಬ್ರಿಜೇಶ್ ಪ್ರಜಾಪತಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಬುಧವಾರ ಮತ್ತೊಬ್ಬ ಸಚಿವ ದಾರಾ ಸಿಂಗ್ ಚೌಹಾಣ್ ಮತ್ತು ಶಾಸಕ ಅವತಾರ್ ಸಿಂಗ್ ಭದಾನ ರಾಜೀನಾಮೆ ನೀಡಿದ್ದು, ಭದಾನ ಅವರು ಸಮಾಜವಾದಿ ಮಿತ್ರಪಕ್ಷವಾದ ಆರ್‌ಎಲ್‌ಡಿಗೆ ಸೇರ್ಪಡೆಯಾಗಿದ್ದಾರೆ.
ಗುರುವಾರ ಸಚಿವ ಧರಂ ಸಿಂಗ್ ಸೈನಿ ಮತ್ತು ಶಾಸಕರಾದ ವಿನಯ್ ಶಾಕ್ಯಾ, ಮುಖೇಶ್ ವರ್ಮಾ ಮತ್ತು ಬಾಲಾ ಅವಸ್ತಿ ಬಿಜೆಪಿ ತೊರೆದಿದ್ದು, ಯೋಗಿ ಸರ್ಕಾರ ಹಿಂದುಳಿದವರ ಪರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂವರೂ ಶಾಸಕರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.
ರಾಜೀನಾಮೆ ನಂತರ..
ರಾಜೀನಾಮೆ ನೀಡಿದ ನಂತರ ಮಾತನಾಡಿದ ಚೌಧರಿ ಅಮರ್ ಸಿಂಗ್, ಈ ಯೋಗಿ ಸರ್ಕಾರ ಸುಳ್ಳುಗಾರ ಸರ್ಕಾರ, ಯಾವುದೇ ಅಭಿವೃದ್ಧಿ ಮಾಡಿಲ್ಲ. ನಾನು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರ ಪಕ್ಷವನ್ನು ಸೇರಿಕೊಳ್ಳುತ್ತೇನೆ. ಶೀಘ್ರದಲ್ಲೇ ಇನ್ನೂ ಹಲವರು ತಮ್ಮ ನನ್ನೊಂದಿಗೆ ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.