ಶ್ರೀನಗರ(ಜಮ್ಮುಕಾಶ್ಮೀರ):ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಒರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹತ್ಯೆಯಾದ ಭಯೋತ್ಪಾದಕನನ್ನು ಎಲ್ಇಟಿಗೆ ಸೇರಿದ ಅಬಿದ್ ವಾನಿ ಎಂದು ಗುರುತಿಸಲಾಗಿದೆ. ಆತನಿಂದ ದೋಷಾರೋಪಣೆಯ ವಸ್ತುಗಳು ಮತ್ತು1 ಎಕೆ 47 ರೈಫಲ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮತ್ತು ಸೇನೆಯ ಜಂಟಿ ತಂಡ ಕರ್ಹಾಮಾ ಕುಂಜರ್‌ನಲ್ಲಿ ರಾತ್ರಿಯ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ. ರಕ್ಷಣಾ ಪಡೆಗಳ ಜಂಟಿ ತಂಡ ಶಂಕಿತ ಸ್ಥಳದ ಕಡೆಗೆ ಸಮೀಪಿಸುತ್ತಿದ್ದಂತೆ ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಸದ್ಯ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ರಜೌರಿಯಲ್ಲೂ ಗುಂಡಿನ ಚಕಮಕಿ: ರಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಜಮ್ಮುವಿನ ಪಿಆರ್‌ಒ ಶನಿವಾರ ತಿಳಿಸಿದ್ದಾರೆ. ಶುಕ್ರವಾರ (ಮೇ.5) ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಕಂಡಿ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ