ಕೇರಳ: ಕೇರಳ ಹೈಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ. ಆನ್‌ಲೈನ್ ರಮ್ಮಿಯ ಮೇಲೆ ಹಕ್ಕನ್ನು ಚಲಾಯಿಸುವುದು ಅಸಂವಿಧಾನಿಕವಾಗಿದೆ. ಯಾಕೆಂದರೆ, ಇದು ಪ್ರಧಾನವಾಗಿ ಕೌಶಲ್ಯದ ಆಟವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಧೀಶರಾದ ಟಿ ಆರ್ ರವಿ ಅವರು ಈ ಸಂಬಂಧ ವಿಚಾರಣೆ ನಡೆಸಿ ಈ ಅಭಿಪ್ರಾಯ ಹೊರ ಹಾಕಿದ್ದಾರೆ. ಹಾಗೆ ಆನ್‌ಲೈನ್ ರಮ್ಮಿ ಆಟದ ಮೇಲಿನ ರಾಜ್ಯ ಸರ್ಕಾರದ ನಿಷೇಧವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದರು.
ರಮ್ಮಿಯಂತಹ ಹಣಕ್ಕಾಗಿ ಆಡುವ ಕೌಶಲ್ಯದ ಆನ್‌ಲೈನ್ ಆಟಗಳನ್ನು ನಿಷೇಧಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ. ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಅಧಿಸೂಚನೆಯು ಅಸಂವಿಧಾನಿಕವಾಗಿದೆ ಎಂದು ಹೇಳಿದೆ.
ಹೆಚ್ಚಿನ ಓದಿಗೆ: ರಮ್ಮಿ ಮುಂತಾದ ಆನ್‌ಲೈನ್ ಗೇಮ್ಗಳ ಮೇಲಿನ ನಿಷೇಧ ಹಿಂಪಡೆದ ತಮಿಳುನಾಡು
ಕೇರಳ ಸರ್ಕಾರವು ಫೆಬ್ರವರಿ 23, 2021ರ ಕೇರಳ ಗೇಮಿಂಗ್ ಆ್ಯಕ್ಟ್ 1960ರ ನಿಯಮಗಳ ಅಡಿ ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ರು. ರಮ್ಮಿ ಆಟದ ಸಂಬಂಧ ಅರ್ಜಿದಾರರು, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ತೀರ್ಪುಗಳ ಆಧಾರದ ಮೇಲೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರಲ್ಲಿ ರಮ್ಮಿಯು ಪ್ರಾಥಮಿಕ ಕೌಶಲ್ಯದ ಆಟವಾಗಿದೆ ಎಂದು ಕರೆಯಲಾಗಿದೆ.
ರಾಜ್ಯ ಜೂಜು ಮತ್ತು ಗೇಮಿಂಗ್ ನಿಯಮಗಳ ಹಿನ್ನೆಲೆ ರಮ್ಮಿ ಒಂದು ಕೌಶಲ್ಯದ ಆಟವಾಗಿದೆ. ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಅಧಿಸೂಚನೆಯು ಸಂವಿಧಾನದ 246ನೇ ವಿಧಿಯ ಅಲ್ಟ್ರಾ ವೈರ್ಸ್ ಆಗಿದೆ ಎಂದು ಮನವಿಯಲ್ಲಿ ಅರ್ಜಿದಾರರು ಉಲ್ಲೇಖಿಸಿದ್ದರು.
ಅರ್ಜಿದಾರರ ಪರ ನಿಂತ ನ್ಯಾಯಾಲಯ ಸರ್ಕಾರವು ಹೊರಡಿಸಿದ ಅಧಿಸೂಚನೆಯನ್ನು ಜಾರಿಗೊಳಿಸಲಾಗದು ಎಂದು ಆದೇಶ ಹೊರಡಿಸಿದೆ. ಅರ್ಜಿದಾರರನ್ನು ವಕೀಲರಾದ ಸಂತೋಷ್ ಮ್ಯಾಥ್ಯೂ, ಥಾಮಸ್ ಪಿ ಕುರುವಿಲ್ಲಾ, ಪಿ ಪ್ರಿಜಿತ್ ಮತ್ತು ಮಾರ್ಟಿನ್ ಜೋಸ್ ಪ್ರತಿನಿಧಿಸಿದ್ದರು.