ಬಾಲಘಾಟ್: ಬಿರ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಡಾನ್ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ನೀರಿನ ಅಭಾವದಿಂದ ಬಾವಿ ಸ್ವಚ್ಛಗೊಳಿಸಲು ತೆರಳಿದ್ದ ಆರು ಯುವಕರಲ್ಲಿ ಐವರು ಸಾವನ್ನಪ್ಪಿರುವ ದುರಂತ ಬೆಳಕಿಗೆ ಬಂದಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ನಡೆದಿದ್ದೇನು?:ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಬಾವಿಯಲ್ಲಿ ಕಸ ಬಿದ್ದಿದ್ದರಿಂದ ಗ್ರಾಮದ ಯುವಕರು ಸ್ವಚ್ಛತೆಗೆ ಮುಂದಾಗಿದ್ದಾರೆ. ಶುಚಿಗೊಳಿಸಲು ಆರು ಯುವಕರು ಬಾವಿಗೆ ಇಳಿದಿದ್ದು, ಸ್ವಚ್ಛಗೊಳಿಸುವ ವೇಳೆ ಬಾವಿಯ ಕೆಳಭಾಗದಲ್ಲಿ ವಿಷಾನಿಲ ಸೋರಿಕೆಯಾಗಿದೆ.
ಹೀಗಾಗಿ ಯುವಕರೆಲ್ಲರೂ ಮೂರ್ಛೆ ಹೋಗಿದ್ದಾರೆ. ಗ್ರಾಮಸ್ಥರು ಅವರನ್ನು ಹೇಗೋ ಬಾವಿಯಿಂದ ಹೊರತೆಗೆದು ಬಿರ್ಸಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಆದರೆ, ಮೃತರಲ್ಲಿ ಮೂವರು ಸಹೋದರರೂ ಸೇರಿರುವುದು ವಿಧಿಯಾಟವಾಗಿದೆ.
ಓದಿ:ಒಳ ಚರಂಡಿ ದುರಸ್ತಿಗೆ ತೆರಳಿದ್ದ ಮೂವರು ವಿಷ ಅನಿಲ ಸೇವಿಸಿ ಸಾವು!
ಸಂತಾಪ ವ್ಯಕ್ತಪಡಿಸಿದ ಸಿಎಂ:ಈ ದುರಂತದ ಬಗ್ಗೆ ತಿಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಐವರು ಯುವಕರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಯುವಕ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಕಂದಾಯ ಇಲಾಖೆ ಸುತ್ತೋಲೆಯ ನಿಬಂಧನೆಗಳ ಪ್ರಕಾರ ಪರಿಹಾರ ಪ್ರಕರಣವನ್ನು ಸಿದ್ಧಪಡಿಸಿ ಮತ್ತು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದ್ದಾರೆ.
ಪರಿಹಾರ ಮೊತ್ತ ನೀಡಲಾಗುವುದು:ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ ಅವರು ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯಿಂದ ಮೃತರ ಕುಟುಂಬಕ್ಕೆ ತಲಾ 20 ಸಾವಿರ ರೂ. ಸರ್ಕಾರದ ನಿಯಮಾನುಸಾರ ಮೃತರ ಕುಟುಂಬಗಳಿಗೂ ಪರಿಹಾರ ಮೊತ್ತ ನೀಡಲಾಗುವುದು ಎಂದು ಹೇಳಿದರು. ಮೃತರನ್ನು ತಮೇಶ್ವರ್ ಬಿಲ್ಸಾರೆ (20), ಪುನೀತ್ ಖುರ್ಚಂಡೆ (32), ಪನ್ನು (28), ಮಣ್ಣು ಖುರ್ಚಂಡೆ (20), ತೇಜಲಾಲ್ ಗೊಂಡ್ (28) ಎಂದು ಗುರುತಿಸಲಾಗಿದೆ.
ಪೊಲೀಸ್ ಆಡಳಿತವು ಗಾಯಾಳುವನ್ನು ಬಿರ್ಸಾ ಆಸ್ಪತ್ರೆಗೆ ಕರೆದೊಯ್ದು ತನಿಖೆಯಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ಬೈಹಾರ್ ವಿಧಾನಸಭಾ ಶಾಸಕ ಸಂಜಯ್ ಉಯಿಕೆ, ಮಾಜಿ ಶಾಸಕ ಭಗತ್ ನೇತಮ್, ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ, ಎಸ್‌ಡಿಎಂ ತನ್ಮಯ್ ವಶಿಷ್ಠ ಶರ್ಮಾ, ತಹಸೀಲ್ದಾರ್ ದೇವಂತಿ ಪಾರ್ಟೆ ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.