ಸಬರಕಾಂತ್ (ಗುಜರಾತ್):ಇಲ್ಲಿನಸಬರಕಾಂತ್ ಜಿಲ್ಲೆಯಲ್ಲಿ ಜೀವಂತ ಶಿಶುವನ್ನೇ ಹೊಲದಲ್ಲಿ ಹೂತಿರುವ ಅಮಾನವೀಯ ಘಟನೆ ನಡೆದಿದೆ. ಅದೃಷ್ಟವಶಾತ್ ಶಿಶು ಹೊಲದ ಮಾಲೀಕರ ಕಣ್ಣಿಗೆ ಬಿದ್ದು ಬದುಕುಳಿದಿದೆ.
ಇಲ್ಲಿನ ಗಂಬೋಯಿ ಗ್ರಾಮದಲ ರೈತ ಹೀತೇಂದ್ರ ಸಿನ್ಹಾ ಎಂಬುವವರು ಎಂದಿನಂತೆ ಬೆಳಗ್ಗೆ ತಮ್ಮ ಹೊಲಕ್ಕೆ ಹೋಗಿದ್ದರು. ಈ ವೇಳೆಯಲ್ಲಿ ಮಣ್ಣಿನಲ್ಲಿ ಹೂತಿರುವ ಶಿಶುವಿನ ಕೈ ಅವರಿಗೆ ಕಾಣಿಸಿಕೊಂಡಿದೆ. ತಕ್ಷಣ ರೈತ ಹಾಗೂ ಇತರರು ಸೇರಿಕೊಂಡು ಮಣ್ಣು ಅಗೆದರು. ಆಗ ಶಿಶು ಜೀವಂತವಾಗಿರುವುದು ಗೊತ್ತಾಗಿದೆ. ಅಂತೆಯೇ, ಹಿಮತ್ ನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದಾರೆ.
"ಗುರುವಾರ ಬೆಳಗ್ಗೆ ಹೊಲ ನೋಡಲೆಂದು ಬಂದಿದ್ದೆ. ಆಗ ಮಣ್ಣಿನಲ್ಲಿ ಶಿಶುವಿನ ಕೈ ಭಾಗ ಮಾತ್ರ ಕಾಣಿಸಿತು. ಹೀಗಾಗಿ ನಮ್ಮ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ಪೂರೈಕೆ ಕಚೇರಿಯ ಸಿಬ್ಬಂದಿಯ ನೆರವಿನಿಂದ ಶಿಶುವನ್ನು ರಕ್ಷಿಸಲಾಯಿತು. ಶಿಶುವನ್ನು ತುಂಬಾ ಆಳದಲ್ಲಿ ಹೂತಿರಲಿಲ್ಲ. ಇನ್ನೂ ಉಸಿರಾಡುತ್ತಿತ್ತು. ಇದನ್ನು ಗಮನಿಸಿದರೆ ಯಾರೋ ಬೆಳಗ್ಗೆಯಷ್ಟೇ ಹೂತು ಹೋಗಿರುವಂತಿದೆ" ಎಂದು ಹೀತೇಂದ್ರ ಸಿನ್ಹಾ ಹೇಳಿದರು.
ಎಸ್ಐ ಸಿ.ಎಫ್.ಠಾಕೂರ್ ಪ್ರತಿಕ್ರಿಯಿಸಿ, "ಈ ಘಟನೆಗೆ ಸಂಬಂಧಿಸಿದಂತೆ ಹೊಲದ ಮಾಲೀಕ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಲಾಗಿದೆ. ಶಿಶುವಿನ ತಾಯಿ ಮತ್ತು ಪೋಷಕರನ್ನು ಪತ್ತೆ ಹೆಚ್ಚಲು ಕ್ರಮ ವಹಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ವಿಡಿಯೋ ನೋಡಿ: ಪ್ಯಾಸೆಂಜರ್ ರೈಲಿನೊಳಗೆ ಗೂಳಿ ಹತ್ತಿಸಿ ಕಟ್ಟಿ ಹಾಕಿದ್ರು, ಕಾರಣವೇನು?