ಕೊಚ್ಚಿ(ಕೇರಳ):ವರದಕ್ಷಿಣಾ ಸಂಬಂಧಿ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ವಧುವನ್ನು ಚಿನ್ನದ ಆಭರಣಗಳಿಂದ ಅಲಂಕರಿಸುವ ಜಾಹೀರಾತುಗಳನ್ನು ಹೆಚ್ಚು ತೋರಬಾರದೆಂದು ಮತ್ತು ಈ ಬಗ್ಗೆ ನಿಯಂತ್ರಣ ಹೇರಬೇಕೆಂದು ಕೇರಳ ರಾಜ್ಯಪಾಲರು ಮನವಿ ಮಾಡಿದ್ದಾರೆ.
ಕೇರಳದಲ್ಲಿ ವರದಕ್ಷಿಣಾ ಸಂಬಂಧಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಜಾಹೀರಾತುಗಳನ್ನು ತೋರಿಸಬಾರದೆಂದು ಜ್ಯುವೆಲ್ಲರಿ ಉದ್ಯಮಗಳ ಮಾಲೀಕರಿಗೆ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಮನವಿ ಮಾಡಿದ್ದಾರೆ.
ಕೇರಳದ ಮೀನುಗಾರಿಕೆ ಮತ್ತು ಸಾಗರೋತ್ತರ ಅಧ್ಯಯನ ವಿಶ್ವವಿದ್ಯಾಲಯ(ಕೆಯುಎಫ್ಒಎಸ್)ನ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಇಂಥಹ ಜಾಹೀರಾತುಗಳು ಸಮಾಜದ ದಾರಿ ತಪ್ಪಿಸುತ್ತವೆ, ತಪ್ಪು ಸಂದೇಶ ರವಾನಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ವರದಕ್ಷಿಣೆ ಖಂಡಿಸಿ ವಿದ್ಯಾರ್ಥಿಗಳಿಂದ ಸ್ವಯಂ ಘೋಷಣಾ ಪತ್ರಗಳನ್ನು ವಿಶ್ವವಿದ್ಯಾಲಯ ಸಂಗ್ರಹಿಸಿತ್ತು. ಈ ಘೋಷಣಾ ಪತ್ರಗಳನ್ನು ವಿವಿಯ ಉಪಕುಲಪತಿ ಪ್ರೊ.ಡಾ.ರಿಗಿ ಜಾನ್ ರಾಜ್ಯಪಾಲರಿಗೆ ನೀಡಿದರು. ಈ ವೇಳೆ ಸುಮಾರು 386 ಪದವಿ, ಸ್ನಾತಕೋತ್ತರ ಪದವಿ ಮತ್ತು ಒಂಬತ್ತು ಜನರಿಗೆ ಪಿಎಚ್‌ಡಿ ನೀಡಲಾಯಿತು. ವರದಕ್ಷಿಣೆ ವಿರೋಧಿ ನಿಲುವು ತಳೆದ ಎಲ್ಲಾ ವಿದ್ಯಾರ್ಥಿಗಳನ್ನು ರಾಜ್ಯಪಾಲರು ಅಭಿನಂದಿಸಿದರು.
ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳೊಂದಿಗೆ ಕೇರಳ ರಾಜ್ಯಪಾಲರು ಇದಕ್ಕೂ ಮೊದಲು ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜುಲೈ 14ರಂದು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಎನ್ಜಿಒಗಳು ಮತ್ತು ಸ್ವಯಂಸೇವಕರು ವರದಕ್ಷಿಣೆ ವಿರುದ್ಧದ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ತಾನೂ ಈ ವಿಚಾರವಾಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ಸಿದ್ಧ ಎಂದು ಭರವಸೆಯನ್ನು ರಾಜ್ಯಪಾಲರು ನೀಡಿದ್ದರು.
ಇದನ್ನೂ ಓದಿ:ರಾಜೌರಿಯಲ್ಲಿ ಬಾಂಬ್ ಸ್ಫೋಟ: ಬಿಜೆಪಿ ನಾಯಕನ ಕುಟುಂಬದ ನಾಲ್ವರಿಗೆ ಗಾಯ; ಓರ್ವ ಸಾವು