ಹರಿದ್ವಾರ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಉತ್ತರಾಖಂಡದ ನವ ಜೋಡಿಯೊಂದು, ನಮ್ಮ ಮದುವೆಗೆ ಕೋವಿಡ್-19 ವರದಿಯೊಂದಿಗೆ ಹಾಜರಾಗಿ ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.
'RT-PCR ನೆಗೆಟಿವ್ ವರದಿ ಹಿಡಿದು ನಮ್ಮ ಮದುವೆಗೆ ಬನ್ನಿ'
ನಮ್ಮ ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೊರೊನಾ RT-PCR ನೆಗೆಟಿವ್ ವರದಿ ಕಡ್ಡಾಯ. ಎಲ್ಲರೂ ದಯವಿಟ್ಟು ಕೋವಿಡ್ ಟೆಸ್ಟ್ ರಿಪೋರ್ಟ್ ಹಿಡಿದುಕೊಂಡು ಮದುವೆಗೆ ಬನ್ನಿ ಎಂದು ನವ ಜೋಡಿಯೊಂದು ಮದುವೆ ಆಮಂತ್ರಣ ಪತ್ರದಲ್ಲಿ ಮನವಿ ಮಾಡಿ ಗಮನ ಸೆಳೆದಿದ್ದಾರೆ.
ಹರಿದ್ವಾರ ಮೂಲದ ವಿಜಯ್ ಮತ್ತು ರಾಜಸ್ಥಾನದ ಜೈಪುರದ ವೈಶಾಲಿ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಕೋವಿಡ್ ನಿಯಂತ್ರಣದ ಕುರಿತು ತಿಳಿಸಿದ್ದಾರೆ. ಕೋವಿಡ್ ವೈರಸ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿವಾಹ ಸಮಾರಂಭವನ್ನು ನಡೆಸಲಾಗುತ್ತಿದೆ. ಹಾಗಾಗಿ ನಮ್ಮ ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ. ಎಲ್ಲರೂ ದಯವಿಟ್ಟು ಟೆಸ್ಟ್ ರಿಪೋರ್ಟ್ ಹಿಡಿದುಕೊಂಡು ಮದುವೆಗೆ ಬನ್ನಿ ಎಂದು ತಿಳಿಸಿದ್ದಾರೆ.
ಮದುವೆ ಆಮಂತ್ರಣ ಕಾರ್ಡ್‌ಗಳನ್ನು ವಿತರಿಸುವ ಮೊದಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಾಹ ಸಮಾರಂಭಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಿವೆ ಎಂದು ನಮಗೆ ತಿಳಿದಿತ್ತು. ಎಲ್ಲಾ ಮಾರ್ಗಸೂಚಿಗಳನ್ನು ಮದುವೆ ಸಮಾರಂಭದಲ್ಲಿ ನಾವು ಅನುಸರಿಸುತ್ತೇವೆ ಎಂದು ವರ ವಿಜಯ್ ಹೇಳಿದ್ದಾರೆ.