ಲಖನೌ (ಉತ್ತರ ಪ್ರದೇಶ):ಗೋರಖ್‌ಪುರ ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿಯನ್ನು ವಿಶೇಷ ನ್ಯಾಯಾಲಯವು ಸೋಮವಾರದಂದು ಭಯೋತ್ಪಾದನಾ ನಿಗ್ರಹ ದಳಕ್ಕೆ(ಎಟಿಎಸ್) ಏಳು ದಿನಗಳ ಕಸ್ಟಡಿಗೆ ನೀಡಿದೆ. ಆರೋಪಿಯ ಎಟಿಎಸ್ ಕಸ್ಟಡಿ ಅವಧಿಯು ಇಂದಿನಿಂದ ಆರಂಭಗೊಂಡು ಮೇ 3 ರಂದು ಕೊನೆಗೊಳ್ಳಲಿದೆ. ಎಟಿಎಸ್ ಅಹ್ಮದ್ ಮುರ್ತಾಜಾ ಅಬ್ಬಾಸಿಯನ್ನು ಗೋರಖ್‌ಪುರ ಜೈಲಿನಿಂದ ಕರೆತಂದ ನಂತರ ಪ್ರಭಾರಿ ಎಟಿಎಸ್ ನ್ಯಾಯಾಧೀಶ ಮೊಹಮ್ಮದ್ ಗಜಾಲಿ ಅವರಿದ್ದ ಪೀಠಕ್ಕೆ ಹಾಜರುಪಡಿಸಿತ್ತು.
ಸೋಮವಾರದಂದು ಭಯೋತ್ಪಾದನಾ ನಿಗ್ರಹ ದಳವು, ಗೋರಖ್‌ಪುರ ಜೈಲು ಸೂಪರಿಂಟೆಂಡೆಂಟ್‌ನ ಪತ್ರವನ್ನು ಸಲ್ಲಿಸಿ ಆರೋಪಿಯನ್ನು ಲಖನೌ ಜೈಲಿಗೆ ಕಳುಹಿಸುವಂತೆ ಕೋರಿತ್ತು. ಆರಂಭದಲ್ಲಿ ನ್ಯಾಯಾಲಯವು ಏಪ್ರಿಲ್ 30 ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ನೀಡಿತ್ತು. ಆದರೆ, ಎಟಿಎಸ್ ಆರೋಪಿಯನ್ನು ಏಳು ದಿನಗಳ ಕಾಲ ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಿತ್ತು. ಆರೋಪಿಯಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸಾಮಾಜಿಕ ಜಾಲತಾಣದಿಂದ ಪ್ರಮುಖ ದತ್ತಾಂಶಗಳನ್ನು ಸ್ವೀಕರಿಸಲಾಗಿದೆ. ಇವುಗಳ ಬಗ್ಗೆ ಆರೋಪಿಯನ್ನು ವಿಚಾರಣೆ ಮಾಡಲು ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಪತ್ರ ಸಲ್ಲಿಸಲಾಯಿತು. ಇದೀಗ ಮೇ 3ರವರೆಗೆ ಆರೋಪಿ ಎಟಿಎಸ್ ಕಸ್ಟಡಿಯಲ್ಲಿರಲಿದ್ದಾರೆ.