ಗುವಾಹಟಿ:ಅಸ್ಸಾಂನಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹಗಳು ವಿಪರೀತ ಹೆಚ್ಚಾಗುತ್ತಿವೆ. ಈ ಬೆಳವಣಿಗೆಯನ್ನು ತಡೆಯಲು ಅಲ್ಲಿನ ಸರ್ಕಾರ ಕಠಿಣ ನಿಯಮ ರೂಪಿಸಿದೆ. ಕಾನೂನುಬದ್ಧ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹೆಣ್ಣುಮಕ್ಕಳನ್ನು ವಿವಾಹವಾದ ಪುರುಷರು ಜೈಲು ಸೇರೋದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಶೇ. 31ರಷ್ಟು ವಿವಾಹಗಳು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಆಗುತ್ತಿವೆ. ಇದು ತಾಯಂದಿರು ಮತ್ತು ಶಿಶು ಮರಣಕ್ಕೆ ಕಾರಣವಾಗಿದೆ. ಹೀಗಾಗಿ 14 ವಯಸ್ಸಿನ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಅಪರಾಧ. ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಅವರನ್ನು ಜೈಲಿಗಟ್ಟಲಾಗುವುದು" ಎಂದು ತಿಳಿಸಿದ್ದಾರೆ.
ಬಾಲ್ಯವಿವಾಹ ತಡೆಗೆ ಕಠಿಣ ಕಾನೂನು: "ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿವೆ. ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ತಾಯ್ತನವನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನುಗಳನ್ನು ತರುತ್ತಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಬಲಪಡಿಸಿ, ಇದರಡಿ ದಾಖಲಾದ ಪ್ರಕರಣಗಳಲ್ಲಿ ವಿವಾಹಿತ ಪುರುಷರಿಗೂ ಶಿಕ್ಷೆ ಕೊಡಿಸಲಾಗುವುದು" ಎಂದು ಸಿಎಂ ಬಿಸ್ವಾ ಶರ್ಮಾ ಹೇಳಿದರು.
ಸಾವಿರಾರು ಗಂಡಂದಿರ ಬಂಧನ: "ಮುಂದಿನ ಐದಾರು ತಿಂಗಳಲ್ಲಿ ಸಾವಿರಾರು ಗಂಡಂದಿರನ್ನು ಬಂಧಿಸಲಾಗುವುದು. 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುವುದು ಅಪರಾಧ. ಅದು ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಸರಿ ಅಂಥವರನ್ನು ಬಂಧಿಸಲಾಗುವುದು. 18 ವರ್ಷ ಕಾನೂನುಬದ್ಧ ವಿವಾಹಕ್ಕೆ ಅನುಮತಿಸುತ್ತದೆ. ಅದಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ವಿವಾಹ ಅಪರಾಧ" ಎಂದು ಹೇಳಿದರು. "ಎಲ್ಲ ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡಲಾಗುವುದು. 18 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ವಿವಾಹವಾದಲ್ಲಿ ಅಂತಹ ಗಂಡಂದಿರಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಲಾಗುವುದು" ಎಂದು ತಿಳಿಸಿದರು.