ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಸಂವಿಧಾನದ 370ನೇ ವಿಧಿ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ, ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಿದ್ದರ ವಿರುದ್ಧದ ಅರ್ಜಿಗಳ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಈ ತಿಂಗಳ (ಡಿಸೆಂಬರ್) ಎರಡನೇ ವಾರದಲ್ಲಿ ನೀಡುವ ಸಾಧ್ಯತೆ ಇದೆ. ಸೆಪ್ಟೆಂಬರ್ 5 ರಂದು ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಸಾಂವಿಧಾನಿಕ ಪೀಠ ಪ್ರಕರಣ ವಿಚಾರಣೆಯನ್ನು ಮುಗಿಸಿದ್ದು, ಡಿಸೆಂಬರ್ ಎರಡನೇ ವಾರದ ಅಂತ್ಯದೊಳಗೆ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಈಟಿವಿ ಭಾರತ್ಗೆ ತಿಳಿದುಬಂದಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರು ಪೀಠದಲ್ಲಿರುವ ಇತರರು.
16 ದಿನ ನಿತ್ಯ ವಿಚಾರಣೆ:370 ನೇ ವಿಧಿ ರದ್ದು ಮಾಡಿ, 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಾಗಿಸಿದ್ದರ ವಿರುದ್ಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನೂ ಒಗ್ಗೂಡಿಸಿ ಆಗಸ್ಟ್ 2 ರಿಂದ 16 ದಿನಗಳ ಕಾಲ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತ್ತು. ಸೆಪ್ಟೆಂಬರ್ 5 ರಂದು ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ್ ಸುಬ್ರಹ್ಮಣಿಯಂ, ರಾಜೀವ್ ಧವನ್, ಜಾಫರ್ ಶಾ, ದುಷ್ಯಂತ್ ದವೆ ಮತ್ತು ಇತರರು ಅರ್ಜಿಗಳ ಪರವಾಗಿ ವಾದಿಸಿದರೆ, ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ, ವಿ.ಗಿರಿ ಮತ್ತಿತರರು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ನ್ಯಾ.ಕೌಲ್ ನಿವೃತ್ತಿಗೂ ಮೊದಲು ತೀರ್ಪು:ಅರ್ಜಿಗಳ ವಿಚಾರಣೆ ನಡೆಸಿದ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಸಂಜಯ್ ಕೌಲ್ ಅವರು ಡಿಸೆಂಬರ್ 25 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್‌ಗೆ ಡಿಸೆಂಬರ್ 15 ರಿಂದ ಚಳಿಗಾಲದ ರಜೆ ಇದೆ. ಹೀಗಾಗಿ ಅದಕ್ಕೂ ಮುನ್ನ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ಏನಿದು 370 ವಿಧಿ ರದ್ದು ಕೇಸ್:ಸಂವಿಧಾನದ 370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿತ್ತು. ಅದರಂತೆ ಅದು ಪ್ರತ್ಯೇಕ ಸಂವಿಧಾನ, ರಾಜ್ಯಾಡಳಿತವನ್ನು ಹೊಂದಿತ್ತು. ಭಾರತದ ಭೂಭಾಗವಾಗಿದ್ದರೂ ಇತರೆಡೆಯ ಕೇಂದ್ರದ ಅಧಿಕಾರ ಅಲ್ಲಿ ಚಲಾವಣೆ ಸಾಧ್ಯವಿರಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019 ರ ಆಗಸ್ಟ್ 5 ರಂದು ವಿಶೇಷ ಮಸೂದೆ ಮಂಡಿಸಿ 370ನೇ ವಿಧಿಯನ್ನು ರದ್ದು ಮಾಡಿ, ಸಂಸತ್ತಿನಿಂದ ಒಪ್ಪಿಗೆ ಪಡೆದುಕೊಂಡಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿದ ಸುಮಾರು 4 ವರ್ಷಗಳ ಬಳಿಕ ಇದರ ವಿಚಾರಣೆ ಆರಂಭವಾಗಿತ್ತು. ಕಣಿವೆ ರಾಜ್ಯವನ್ನು ಅಖಂಡ ಭಾರತಕ್ಕೆ ಸೇರಿಸಿದ ಬಳಿಕ ಅಲ್ಲಿ ಕಲ್ಲು ತೂರಾಟ, ಗಲಭೆಗಳು, ಪ್ರತ್ಯೇಕತಾ ಹೋರಾಟಗಳು ತೀವ್ರಗತಿಯಲ್ಲಿ ಇಳಿಮುಖವಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿಧಿ ರದ್ದು ಮಾಡಿ ರಾಜ್ಯವನ್ನು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎಂಬ 2 ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವೆಲ್ಲವನ್ನೂ ವಿಚಾರಣೆ ನಡೆಸಲು 2019 ರಲ್ಲಿ ಸಾಂವಿಧಾನಿಕ ಪೀಠವನ್ನು ರಚಿಸಲಾಗಿತ್ತು.
ಇದನ್ನೂ ಓದಿ:370ನೇ ವಿಧಿ ರದ್ದುಗೊಂಡ ಬಳಿಕ ಜಮ್ಮು-ಕಾಶ್ಮೀರದ ಅಭಿವೃದ್ಧಿಯ ಸ್ಥಿತಿ-ಗತಿ ಹೇಗಿದೆ?