ಬಾಲಸೋರ್ (ಒಡಿಶಾ):ತ್ರಿವಳಿ ರೈಲು ದುರಂತದಿಂದ ದೇಶ ಮತ್ತು ವಿಶ್ವದಾದ್ಯಂತ ಸುದ್ದಿಯಾಗಿದ್ದಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಲಿದ್ದ ಭೀಕರ ಅಪಘಾತವೊಂದು ತಪ್ಪಿದೆ. ನೀಲಗಿರಿ ರೋಡ್ ರೈಲು ನಿಲ್ದಾಣದ ಬರುನಾ ಸಿಂಗ್ ಚಕ್ ಬಳಿ ಮೆಮು ರೈಲು ಲೋಕೋ ಪೈಲಟ್ ಮುಂಜಾಗ್ರತೆಯಿಂದ ಸ್ವಲ್ಪದರಲ್ಲಿ ದೊಡ್ಡ ದುರಂತದಿಂದ ತಪ್ಪಿದೆ.
ಆರಂಭಿಕ ವರದಿಗಳ ಪ್ರಕಾರ, ರೈಲು ಕೆಲವು ಕೆಲಸಗಳು ನಡೆಯುತ್ತಿದ್ದ ಲೂಪ್ ಲೈನ್ ಟ್ರ್ಯಾಕ್ ಅನ್ನು ಪ್ರವೇಶಿಸಿದೆ. ಆಗ ಲೋಕೋ ಪೈಲಟ್ ತಕ್ಷಣವೇ ಎಚ್ಚೆತ್ತು ಬ್ರೇಕ್ ಹಾಕಿದ್ದರಿಂದಾಗಿ ನಡೆಯಲಿದ್ದ ದುರಂತವೊಂದು ತಪ್ಪಿದೆ. ಮೆಮು ರೈಲು ಭದ್ರಕ್ ಜಿಲ್ಲೆಯಿಂದ ಬಾಲಸೋರ್‌ಗೆ ತೆರಳುತ್ತಿದ್ದಾಗ ಟ್ರಾಕ್ ಎಂಡ್‌ಪಾಯಿಂಟ್‌ನಲ್ಲಿ ಕ್ರಾಸ್ ಓವರ್ ಅಥವಾ ಇಂಟರ್‌ಲಾಕ್ ಸಮಸ್ಯೆಯನ್ನ ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ಬ್ರೇಕ್ ಹಾಕಿದ್ದಾರೆ.
ವರದಿಯ ಪ್ರಕಾರ, ಲೋಕೋ ಪೈಲಟ್ ನಂತರ ರೈಲನ್ನು ಬಾಲಸೋರ್ ಕಡೆಗೆ ತಿರುಗಿಸಿದ್ದಾರೆ. ಇದರಿಂದಾಗಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ರೈಲುಗಳು ಕೂಡಾ ಕೆಲಕಾಲ ಸಂಚಾರದಿಂದ ಸ್ಥಗಿತಗೊಂಡಿವೆ. ಈ ಬಗ್ಗೆ ಬಿಜೈಧರ್ ಬಾರಿಕ್ ಎಂಬ ಪ್ರಯಾಣಿಕ ಮಾತನಾಡಿ, “ಹಳಿಯಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ರೈಲ್ವೆ ಚಾಲಕ ಗುರುತಿಸಿ ಬ್ರೇಕ್ ಹಾಕಿದ್ದಾರೆ. ನಂತರ ರೈಲು ಸುಮಾರು 200 ರಿಂದ 300 ಮೀಟರ್ ಹಿಮ್ಮುಖವಾಯಿತು. ಆಗ ನಾವು ರೈಲಿನಿಂದ ಕೆಳಗಿಳಿದೆವು'' ಎಂದಿದ್ದಾರೆ.
290 ಕ್ಕೂ ಹೆಚ್ಚು ಪ್ರಯಾಣಿಕರು ಸಾವು: ದುರಂತವೊಂದು ತಪ್ಪಿದರೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮನದಲ್ಲಿ ಆತಂಕ ಮೂಡಿಸಿದೆ. ಜೂನ್‌ನಲ್ಲಿ ಬಾಲಸೋರ್‌ನಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತವು ಜಗತ್ತಿನಾದ್ಯಂತ ಆಘಾತವನ್ನು ಸೃಷ್ಟಿಸಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ರೈಲು ಅಪಘಾತದಲ್ಲಿ 290 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು.