ಹೈದರಾಬಾದ್, ತೆಲಂಗಾಣ :ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಎರಡು ತಿಂಗಳ ಕಾಲ ಕರ್ನಾಟಕದ ಹೆಚ್ಚುವರಿ ರಾಜ್ಯಪಾಲರಾಗಿದ್ದ ಕೊನಿಜೇಟಿ ರೋಸಯ್ಯ (88) ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಸಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದೇಶದ ರಾಜಕೀಯ ಗಣ್ಯರು, ಅಭಿಮಾನಿಗಳು ಕಂಬನಿಗರೆದಿದ್ದಾರೆ.
ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ ಮಾತ್ರವಲ್ಲದೇ ತಮಿಳುನಾಡಿನಲ್ಲಿ ಪೂರ್ಮಾವಧಿ 5 ವರ್ಷಗಳ ಕಾಲ ರಾಜ್ಯಪಾಲರಾಗಿ ರೋಸಯ್ಯ ಕಾರ್ಯ ನಿರ್ವಹಿಸಿದ್ದಾರೆ.
ರೋಸಯ್ಯ ಅವರು 1933 ಜುಲೈ 4ರಂದು ಆಂಧ್ರದ ಗುಂಟೂರು ಜಿಲ್ಲೆಯ ವೇಮೂರಿನಲ್ಲಿ ಜನಿಸಿದರು. ಗುಂಟೂರಿನ ಹಿಂದೂ ಕಾಲೇಜಿನಲ್ಲಿ ಕಾಮರ್ಸ್ ಓದಿದ್ದ ಅವರು. ಸ್ವಾತಂತ್ರ್ಯ ಯೋಧರಾದ ಹಾಗೂ ರೈತ ನಾಯಕರಾದ ಎನ್ಜಿ ರಂಗ ಅವರ ಶಿಷ್ಯರೂ ಆಗಿದ್ದರು.
1968ರಲ್ಲಿ ರೋಸಯ್ಯ ಕಾಂಗ್ರೆಸ್ ಪಕ್ಷದಿಂದ ಮೊದಲು ಪರಿಷತ್ಗೆ ಆಯ್ಕೆಯಾದ ಅವರು, 1974 ಮತ್ತು 1980ರಲ್ಲಿಯೂ ಪರಿಷತ್ಗೆ ಆಯ್ಕೆಯಾಗಿದ್ದರು.
ಮರ್ರಿ ಚೆನ್ನಾರೆಡ್ಡಿ ಸರ್ಕಾರದಲ್ಲಿ ಅವರು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಸಿಎಂಗಳ ಅಡಿಯಲ್ಲಿ ಸರ್ಕಾರದ ಪ್ರಮುಖ ಹುದ್ದೆಗಳ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದರು.
2004-09ರ ಅವಧಿಯಲ್ಲಿ ಚಿರಾಲ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸೆಪ್ಟೆಂಬರ್ 3, 2009ರಿಂದ ನವೆಂಬರ್ 24, 2010 ರವರೆಗೆ ಅವಿಭಜಿತ ಆಂಧ್ರಪ್ರದೇಶಕ್ಕೆ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.
ಇದರ ಜೊತೆಗೆ ಆಗಸ್ಟ್ 31, 2011ರಿಂದ ಆಗಸ್ಟ್ 30, 2016ರವರೆಗೆ ತಮಿಳುನಾಡಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲ, 28 ಜೂನ್, 2014ರಿಂದ 31 ಆಗಸ್ಟ್, 2014ರವರೆಗೂ ಕರ್ನಾಟಕಕ್ಕೆ ಹೆಚ್ಚುವರಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:Jawad Cyclone ಭೀತಿ : ಆಂಧ್ರದಲ್ಲಿ 54 ಸಾವಿರ ಜನರ ಸ್ಥಳಾಂತರ