ತುಮಕೂರು/ಹೈದರಾಬಾದ್:ಗೂಡ್ಸ್ ವಾಹನ ಖರೀದಿಸಲು ಶೋ ರೂಮ್ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ರೈತನೋರ್ವನಿಗೆ ಹಿಯಾಳಿಸಿ ಕಳಿಸಿದ್ದ ಘಟನೆ ಇತ್ತೀಚೆಗೆ ತುಮಕೂರಿನಲ್ಲಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಒಂದೇ ತಾಸಲ್ಲಿ 10 ಲಕ್ಷ ರೂ. ತೆಗೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿಗೆ ರೈತ ಕೆಂಪೇಗೌಡ ತಿರುಗೇಟು ನೀಡಿದ್ದರು. ಈ ಘಟನೆ ನಡೆದ ಮೂರು ದಿನಗಳ ಬಳಿಕ ಮಹೀಂದ್ರ ಕಂಪನಿ ಗೂಡ್ಸ್ ವಾಹನವನ್ನ ರೈತನಿಗೆ ಡೆಲಿವರಿ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಆನಂದ ಮಹೀಂದ್ರಾ ಟ್ವೀಟ್ ಇಂತಿದೆ..ಜನವರಿ 21ರಂದು ನಮ್ಮ ಶೋ ರೂಂಗೆ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿರುವ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಈಗಾಗಲೇ ಭರವಸೆ ನೀಡಿರುವ ರೀತಿಯಲ್ಲಿ ನಾವು ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿರುವ ಅವರು, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಮಹೀಂದ್ರಾ ಕುಟುಂಬಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಮಹೀಂದ್ರಾ ಆಟೋಮೋಟಿವ್ ಮಾಡಿರುವ ಟ್ವೀಟ್ ಅನ್ನ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ರಿಟ್ವೀಟ್ ಮಾಡಿದ್ದಾರೆ.
ಜನವರಿ 22ರಂದು ವಾಹನ ಖರೀದಿ ಮಾಡಲು ತುಮಕೂರಿನ ಕೆಂಪೇಗೌಡ ಶೋ ರೂಮ್ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹೀಯಾಳಿಸಿ ಕಳಿಸಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಅವಮಾನಕ್ಕೊಳಗಾಗಿದ್ದ ರೈತ, ಒಂದೇ ತಾಸಲ್ಲಿ 10 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.