ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಕೋವಿಡ್-19 ಮತ್ತು ಅದೇ ರೀತಿಯ ಲಕ್ಷಣಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವ ಬಗ್ಗೆ ಲೋಕಸಭಾ ಸಂಸದ ಕುಂವರ್ ಡ್ಯಾನಿಷ್ ಅಲಿ ಕಳವಳ ವ್ಯಕ್ತಪಡಿಸಿದ್ದು, ಹೊಸ ವೈರಸ್ ತಳಿಯ ಪತ್ತೆಗಾಗಿ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರದ ನಿಯೋಗವನ್ನು ಕಳುಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದ ಸಂಸದ ಪ್ರಧಾನಿಗೆ ಈ ಕುರಿತು ಪತ್ರ ಬರೆದಿದ್ದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಶತಮಾನದಲ್ಲೇ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೊಸ ವೈರಸ್ ತಳಿಯ ಸ್ಫೋಟದಿಂದ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅಲ್ಲೋಲ - ಕಲ್ಲೋಲ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
"ನಾನು ಸಂಸದನಾಗಿರುವ ಜೊತೆಗೆ ಎಎಂಯು ದ ಕೋರ್ಟ್ ಸದಸ್ಯ ಕೂಡ ಆಗಿದ್ದೇನೆ. ಇತ್ತೀಚೆಗಷ್ಟೇ ಶತಮಾನ ಪೂರೈಸಿರುವ ಅಲಿಗಢ ಮುಸ್ಲಿಂ ವಿವಿಯನ್ನು ರಕ್ಷಿಸುವಂತೆ ವಿವಿಯ ಹಳೆಯ ವಿದ್ಯಾರ್ಥಿಗಳು ಮೊರೆ ಇಡುತ್ತಿದ್ದಾರೆ. ವೈದ್ಯಕೀಯ ಸಲಕರಣೆಗಳು ಹಾಗೂ ಇತರ ಸೌಲಭ್ಯಗಳ ಕೊರತೆ ಕಾರಣದಿಂದ ಎಎಂಯು ದಲ್ಲಿರುವ ಜವಾಹರ್ಲಾಲ್ ನೆಹರೂ ಮೆಡಿಕಲ್ ಕಾಲೇಜು ಈ ಸವಾಲಿನ ಪರಿಸ್ಥಿತಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕೂಡಲೇ ಎಎಂಯು ಕ್ಯಾಂಪಸ್ಗೆ ಅಗತ್ಯ ವೈದ್ಯಕೀಯ ನೆರವು ನೀಡಬೇಕು ಅಥವಾ ಮೆಡಿಕಲ್ ಕಾಲೇಜಿಗೆ ಸಾಕಷ್ಟು ಪ್ರಮಾಣದ ಅನುದಾನ ನೀಡಬೇಕು." ಎಂದು ಡ್ಯಾನಿಷ್ ಅಲಿ ಪ್ರಧಾನಿಗೆ ಒತ್ತಾಯಿಸಿದ್ದಾರೆ.
ಈವರೆಗೆ ಸುಮಾರು 35 ನಿವೃತ್ತ ಅಥವಾ ಸೇವೆಯಲ್ಲಿದ್ದ ಎಎಂಯು ಸಿಬ್ಬಂದಿ ಕೊರೊನಾ ಅಥವಾ ಅದೇ ರೀತಿಯ ಲಕ್ಷಣಗಳಿಂದ ಸಾವಿಗೀಡಾಗಿದ್ದಾರೆ.