ನವದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಇಂದು ಹೇಳಿಕೆ ನೀಡಲಿದ್ದಾರೆ.
ಉತ್ತರ ಪ್ರದೇಶದ ಹಾಪುರ್‌ನಲ್ಲಿ ಗುರುವಾರ ತಮ್ಮ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆಯ ಕುರಿತು ಲೋಕಸಭೆ ಸದಸ್ಯ ಓವೈಸಿ ಸದನದಲ್ಲಿ ಮಾತನಾಡಿದ್ದರು. ಇದಾದ ನಂತರ ಗೋಯಲ್ ಪ್ರತಿಕ್ರಿಯಿಸಿ, ಓವೈಸಿ ಜೀ ಸುರಕ್ಷಿತವಾಗಿದ್ದಾರೆ, ಇದಕ್ಕಾಗಿ ದೇವರಿಗೆ ಧನ್ಯವಾದಗಳು. ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತೇವೆ. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ ಎಂದಿದ್ದರು.
ಇದನ್ನೂ ಓದಿ: ಕೊರೊನಾ ವಿರುದ್ಧ ಭಾರತಕ್ಕೆ ಮತ್ತೊಂದು ಅಸ್ತ್ರ: ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಅಸ್ತು
ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಘಟನೆಗೆ ಬಳಸಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗೃಹ ಸಚಿವರು ಸದನಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದರು.
ಉತ್ತರ ಪ್ರದೇಶದ ಹಾಪುರದಲ್ಲಿ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ಗುರುವಾರ ನಡೆದಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಓವೈಸಿ ಸಂಜೆ ದೆಹಲಿಗೆ ಹಿಂತಿರುಗುತ್ತಿದ್ದರು.
ಘಟನೆಯಲ್ಲಿ ಭಾಗಿಯಾಗಿರುವ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಹಲವಾರು ತಂಡಗಳು ಈ ವಿಷಯವನ್ನು ತನಿಖೆ ನಡೆಸುತ್ತಿವೆ ಮತ್ತು ತನಿಖೆಯ ಮೇಲ್ವಿಚಾರಣೆಗೆ ಮೀರತ್ ಪ್ರದೇಶದ ಇನ್ಸ್‌ಪೆಕ್ಟರ್ ಜನರಲ್ ಅವರನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.