ಕಿಬಿಥೂ (ಅರುಣಾಚಲ ಪ್ರದೇಶ): ಗೃಹ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ಖಂಡಿಸಿದೆ. ಇದರ ಬೆನ್ನಲ್ಲೇ ಚೀನಾದ ನಡೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಶಾ, ಒಂದು ಸೂಜಿ ಮೊನೆಯೂರುವ ಜಾಗವನ್ನೂ ನಾವು ಅತಿಕ್ರಮಿಸಲು ಬಿಡೆವು. ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ಭಾರತೀಯ ಸೇನೆ ಕಾವಲು ಕಾಯುತ್ತಿರುವುದರಿಂದ ಇಂದು ಯಾರೂ ಕೂಡ ಭಾರತ ಮೇಲೆ ಕೆಂಗಣ್ಣು ಬೀರಲು ಸಾಧ್ಯವಿಲ್ಲ. ನಮ್ಮ ಐಟಿಬಿಪಿ ಜವಾನರು ಮತ್ತು ಭಾರತೀಯ ಸೇನೆ ರಾತ್ರಿ-ಹಗಲೆನ್ನದೇ ಕೆಲಸ ಮಾಡುತ್ತಿದ್ದು ದೇಶದ ಜನರು ನೆಮ್ಮದಿಯಿಂದ ನಿದ್ರಿಸಬಹುದು ಎಂದು ಶಾ ತಿಳಿಸಿದರು. ಭಾರತ ತನ್ನ ಭದ್ರತೆಯನ್ನು ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದ ಭೂಮಿಯನ್ನು ಯಾರು ಬೇಕಾದರೂ ಅತಿಕ್ರಮಿಸಬಹುದಾದ ದಿನಗಳು ಕಳೆದುಹೋಗಿವೆ ಎಂದರು.
ಇದೇ ವೇಳೆ, ಅಮಿತ್ ಶಾ ಅವರು ಅರುಣಾಚಲ ಪ್ರದೇಶದ ಗಡಿಗ್ರಾಮ ಕಿಬಿಥೂಗೆ ಭೇಟಿ ನೀಡಿದರು. ಏಪ್ರಿಲ್ 10 ಮತ್ತು 11 ರಂದು ಎರಡು ದಿನಗಳ ಪ್ರವಾಸ ಕೈಗೊಂಡಿರುವ ಶಾ, ಕಿಬಿಥೂಗೆ ಭೇಟಿ ನೀಡಿದ ವೇಳೆ ವಾಲೋಂಗ್ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ. ಈ ಹಿಂದೆ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳನ್ನು ತನ್ನದೆಂದು ಘೋಷಣೆ ಮಾಡಿತ್ತು. ಅಷ್ಟೇ ಅಲ್ಲದೇ, ಇವುಗಳನ್ನು ಝಂಗ್ನಾನ್ ಎಂದು ಪ್ರತ್ಯೇಕವಾಗಿ ಕರೆದಿತ್ತು. ಚೀನಾದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಅಮಿತ್ ಶಾ ಇಲ್ಲಿಗೆ ಭೇಟಿ ನೀಡಿರುವುದು ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದಿದೆ.