ಶ್ರೀನಗರ (ಜಮ್ಮು-ಕಾಶ್ಮೀರ):ಮೋದಿ ಸರ್ಕಾರವು ಭಯೋತ್ಪಾದನೆ ನಿರ್ಮೂಲನೆಗಾಗಿ ನಿರಂತರ ಹೋರಾಟ ನಡೆಸುತ್ತಿದೆ. ಜಮ್ಮುಕಾಶ್ಮೀರದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಶಾಂತಿ ಸ್ಥಾಪಿಸುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಅಮಿತ್ ಶಾ, 2019 ರ ಫೆಬ್ರವರಿ 14 ರಂದು ಭಯೋತ್ಪಾದಕ ದಾಳಿ ನಡೆದಿದ್ದ ಪುಲ್ವಾಮಾ ಜಿಲ್ಲೆಯ ಲೇಥ್‌ಪೊರಾದಲ್ಲಿರುವ ಸಿಆರ್‌ಪಿಎಫ್ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸೈನಿಕರೊಟ್ಟಿಗೆ ಊಟ ಮಾಡಿ, ರಾತ್ರಿ ಅಲ್ಲಿಯೇ ತಂಗಿದ್ದರು.
ಈ ಸಮಯದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು-ಸುವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಪ್ರಧಾನಿ ಮೋದಿಯವರ ಇಚ್ಛೆಯಂತೆ ಶಾಂತಿಯುತ ಜಮ್ಮು ಮತ್ತು ಕಾಶ್ಮೀರ ಸ್ಥಾಪಿಸುವುದು ನಮ್ಮ ಗುರಿ ಎಂದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಕಲ್ಲು ತೂರಾಟ ಸಾಮಾನ್ಯವಾಗಿತ್ತು. ಅಂಥ ಘಟನೆಗಳು ಈಗ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿವೆ. ನಿಜಕ್ಕೂ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಭಯೋತ್ಪಾದನೆಯು ಮಾನವೀಯತೆಯ ವಿರುದ್ಧವಾಗಿದೆ. ಭಯೋತ್ಪಾದನೆಯಿಂದ ಕಾಶ್ಮೀರದ ಜನರನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಪಾಕ್ ಗೆಲುವು ಸಂಭ್ರಮಿಸಿದ ಕಾಶ್ಮೀರಿಗಳ ವಿರುದ್ಧ ಕೋಪವೇಕೆ? ಮೆಹಬೂಬಾ ಟ್ವೀಟ್
370 ನೇ ವಿಧಿ ರದ್ದತಿ ಬಳಿಕ ಶಾಂತಿ-ಸುವ್ಯವಸ್ಥೆ ಕಾಪಾಡಿದ ಸಿಆರ್‌ಪಿಎಫ್ ಹಾಗೂ ಭದ್ರತಾ ಪಡೆಗಳಿಗೆ ಗೃಹ ಸಚಿವರು ಕೃತಜ್ಞತೆ ಸಲ್ಲಿಸಿದ್ರು. 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸಿದಾಗ ಏನಾದರೂ ಬೃಹತ್ ಪ್ರತಿಕ್ರಿಯೆ ಉಂಟಾಗುತ್ತದೆ ಎಂಬ ಅನೇಕ ಆತಂಕಗಳಿದ್ದವು. ಆದರೆ, ಅಂಥ ಯಾವುದೇ ಸನ್ನಿವೇಶ ಉಂಟಾಗಲಿಲ್ಲ. ಇಂದು ನಾನಿಲ್ಲಿಗೆ ಬಂದಿದ್ದೇನೆ, ನಮ್ಮ ಸೇನೆಯ ಉತ್ತಮ ಸೇವೆಯಿಂದ ಇಂದು ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಇದು ನಮಗೆ ದೊಡ್ಡ ವಿಷಯವಾಗಿದೆ ಎಂದು ಅವರು ಹೇಳಿದರು.
ಶೀಘ್ರದಲ್ಲೇ ಪುಲ್ವಾಮಾದಲ್ಲಿ ಈಗ 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದರು. 2004-14ರ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ 208 ನಾಗರಿಕರು ಮತ್ತು 105 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರೆ, 2014-21ರ ಅವಧಿಯಲ್ಲಿ ಅದು ವರ್ಷಕ್ಕೆ 60 ಸಿಬ್ಬಂದಿ ಮತ್ತು 30 ನಾಗರಿಕರಿಗೆ ಇಳಿದಿದೆ ಎಂದು ಶಾ ಮಾಹಿತಿ ನೀಡಿದರು.