ನವದೆಹಲಿ:ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸತತ 3ನೇ ವರ್ಷ ಹಿಂದಿನ ದಾಖಲೆ ಮುರಿದಿದ್ದಾರೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಶೈಕ್ಷಣಿಕ ವರ್ಷ 2022-23ರಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2,68,000 ದಾಟಿದೆ ಎಂದು ಅವರು ತಿಳಿಸಿದ್ದಾರೆ. 2,68,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸದ್ಯ ಅಧ್ಯಯನ ಮಾಡುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ ಎಂದು ಗಾರ್ಸೆಟ್ಟಿ ಗುರುವಾರ ಹಂಫ್ರಿ ಫೆಲೋಶಿಪ್ ಕಾರ್ಯಕ್ರಮದ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಅಮೆರಿಕದ ಶಿಕ್ಷಣದ ಮೇಲೆ ಭಾರತೀಯ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಪ್ರಭಾವ ಹೊಂದಿದ್ದಾರೆ ಎಂಬುದನ್ನು ರಾಯಭಾರಿ ವಿವರಿಸಿದ್ದು, ಎಲ್ಲ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕಾಲು ಭಾಗವಾಗಿದ್ದಾರೆ ಎಂದರು. ಚೀನಾವನ್ನು ಹಿಂದಿಕ್ಕಿ ಭಾರತವು ಅಮೆರಿಕದಲ್ಲಿ ಪದವಿ ವಿದ್ಯಾರ್ಥಿಗಳ ಅತಿದೊಡ್ಡ ಮೂಲವಾಗಿದೆ ಎಂದರು.