ನವದೆಹಲಿ: ಅಗ್ನಿಪಥ್ ಯೋಜನೆಯಡಿ ಸೇನಾಪಡೆಗೆ ಸೇರ ಬಯಸುವ ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆಯು ಹಲವಾರು ನೀತಿ - ನಿಯಮಗಳನ್ನು ಭಾನುವಾರ ಘೋಷಣೆ ಮಾಡಿದೆ. ಅಗ್ನಿವೀರರು ಭಾರತೀಯ ಸೇನೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಹೊಂದಿರಲಿದ್ದು, ಈ ಶ್ರೇಣಿಯು ಈಗಿರುವ ಶ್ರೇಣಿಗಳಿಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ. ಅಲ್ಲದೇ ಅಗ್ನಿವೀರರನ್ನು ಯಾವುದೇ ರೆಜಿಮೆಂಟ್ ಅಥವಾ ಯುನಿಟ್ಗೆ ನೇಮಕ ಮಾಡಬಹುದಾಗಿದೆ.
ಸರ್ಕಾರಿ ರಹಸ್ಯಗಳ ಕಾಯ್ದೆ, 1923ರ ಪ್ರಕಾರ, ಅಗ್ನಿವೀರರು ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ತಿಳಿದುಕೊಂಡ ಗುಪ್ತ ಮಾಹಿತಿಯನ್ನು ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಮೂಲಗಳಿಗೆ ಬಹಿರಂಗ ಮಾಡುವಂತಿಲ್ಲ. "ಈ ಯೋಜನೆ ಜಾರಿಯ ನಂತರ ಅಗ್ನಿವೀರ್ ಸೇವಾ ಅವಧಿಯನ್ನು ಪೂರ್ಣಗೊಳಿಸಿರುವವರನ್ನು ಮಾತ್ರ ವೈದ್ಯಕೀಯ ತಾಂತ್ರಿಕ ಕೇಡರ್ ಹೊರತುಪಡಿಸಿ ಸೇನಾಪಡೆಯ ರೆಗ್ಯುಲರ್ ಕೇಡರ್ಗೆ ನೇಮಕಾತಿ ಮಾಡಿಕೊಳ್ಳಲಾಗುವುದು" ಎಂದು ಸೇನಾಪಡೆ ಹೇಳಿದೆ.
ಸೇವೆಯಲ್ಲಿರುವ ಅಗ್ನಿವೀರ್ ಯೋಧನನ್ನು ಬಿಡುಗಡೆ ಮಾಡಲು ಬರಲ್ಲ:ಸೇವಾ ಅವಧಿಯಲ್ಲಿರುವ ಯಾವುದೇ ಅಗ್ನಿವೀರ್ ಯೋಧನನನ್ನು ಆತನ ಮನವಿಯ ಮೇರೆಗೆ ಸೇವೆಯಿಂದ ಬಿಡುಗಡೆ ಮಾಡಲು ಬರುವುದಿಲ್ಲ. "ಆದಾಗ್ಯೂ ಕೆಲವೊಂದು ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಉನ್ನತ ಅಧಿಕಾರಿಗಳ ಅನುಮತಿಯ ಮೇರೆಗೆ ಮಾತ್ರ ಅಗ್ನಿವೀರ್ರನ್ನು ಸೇವೆಯಿಂದ ಬಿಡುಗಡೆಗೊಳಿಸಬಹುದು."
ಜೂನ್ 14 ರಂದು ಘೋಷಿಸಲಾದ ಅಗ್ನಿವೀರ್ ಯೋಜನೆಯಡಿ ಹದಿನೇಳುವರೆಯಿಂದ 21 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಸೇನಾಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ಇದರಲ್ಲಿ ಶೇ 15 ರಷ್ಟು ಜನರನ್ನು ಮಾತ್ರ ಮುಂದಿನ 15 ವರ್ಷಗಳವರೆಗೆ ನೇಮಕಾತಿ ಮಾಡಲಾಗುತ್ತದೆ. ಆದರೆ, 2022 ಕ್ಕೆ ಅನ್ವಯವಾಗುವಂತೆ ಸರ್ಕಾರವು ಕನಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ನಂತರದಲ್ಲಿ ಏರಿಸಿದೆ.
ಹೊಸ ಯೋಜನೆಯಡಿ ನೇಮಕವಾಗುವವರಿಗೆ ಅಗ್ನಿವೀರ್ ಅಂತಾರೆ:ಹೊಸ ಯೋಜನೆಯಡಿ ನೇಮಕವಾಗುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುವುದು. ಹೊಸ ನೇಮಕಾತಿಗಳು ಸೇನಾಪಡೆ ಕಾಯ್ದೆ, 1950 ರ ಪ್ರಕಾರ ನಡೆಯಲಿವೆ ಹಾಗೂ ಇದರಲ್ಲಿ ನೇಮಕವಾದವರನ್ನು ಭೂಸೇನೆ, ನೌಕಾಪಡೆ ಅಥವಾ ವಾಯುಪಡೆ ಹೀಗೆ ಎಲ್ಲಿಯಾದರೂ ಸೇವೆಗೆ ನಿಯೋಜಿಸಬಹುದು.
ಅಗ್ನಿವೀರರು ತಮ್ಮ ಯುನಿಫಾರ್ಮ್ ಮೇಲೆ ವಿಶಿಷ್ಟವಾದ ಗುರುತೊಂದನ್ನು ಧರಿಸಲಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಸೇನಾಪಡೆಯ ಅಗತ್ಯತೆ ಹಾಗೂ ನೀತಿಗಳಿಗನುಗುಣವಾಗಿ, ರೆಗ್ಯುಲರ್ ಕೇಡರ್ ಶ್ರೇಣಿಗೆ ಅರ್ಜಿ ಸಲ್ಲಿಸಲು ಸೇವಾವಧಿ ಪೂರ್ಣಗೊಳಿಸಿದ ಅಗ್ನಿವೀರರಿಗೆ ಅವಕಾಶವಿರುತ್ತದೆ.
ಸೇನಾ ಪ್ರಕಟಣೆ ಹೇಳುವುದೇನು?:ಅಗ್ನಿವೀರರ ಇಂಥ ಅರ್ಜಿಗಳನ್ನು ಅವರ ಕಾರ್ಯಕ್ಷಮತೆಯ ಆಧಾರದಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಪರಿಶೀಲಿಸಲಾಗುವುದು. ನಾಲ್ಕು ವರ್ಷ ಸೇವಾವಧಿ ಪೂರೈಸಿದ ಪ್ರತಿ ಬ್ಯಾಚಿನಿಂದ ಗರಿಷ್ಠ ಶೇ 25 ರಷ್ಟು ಅಗ್ನಿವೀರರನ್ನು ರೆಗ್ಯುಲರ್ ಶ್ರೇಣಿಗೆ ಪರಿಗಣಿಸಲಾಗುವುದು ಎಂದು ಭಾರತೀಯ ಸೇನಾಪಡೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.