ಪಾಟ್ನಾ(ಬಿಹಾರ): ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ವಿರುದ್ಧ ಬಿಹಾರ ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 138 ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ 716 ಜನರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ, ಕೆಲ ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿ ಗುಂಪುಗಳೊಂದಿಗೆ ಬೆರೆತು ಗಲಭೆಗಳನ್ನು ಸೃಷ್ಟಿಸುತ್ತಿವೆ. ಈ ಬಗ್ಗೆ ವಿಶೇಷ ಘಟಕ ಮತ್ತು ಗುಪ್ತಚರ ಬ್ಯೂರೋದ ಅಧಿಕಾರಿಗಳು ನಿಗಾ ವಹಿಸಿ, ಅಂತಹವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶನಿವಾರ ಕೂಡ ಪಾಟ್ನಾದ ಮಸೌಧಿ ಮತ್ತು ನೆರೆಯ ಜಹಾನಾಬಾದ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದೆ. ಈ ಸಂಬಂಧ ಮಸೌದಿದಲ್ಲಿ 61 ಮತ್ತು ಜಹಾನಾಬಾದ್ನಲ್ಲಿ 50 ಜನರನ್ನು ಬಂಧಿಸಲಾಗಿದೆ. ಒಟ್ಟಾರೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ 140 ಜನರನ್ನು ಬಂಧಿಸಿದ್ದೇವೆ ಎಂದು ವಿವರಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಸೌಧಿಯಲ್ಲಿ 30 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಅಲ್ಲಿ 400ಕ್ಕೂ ಹೆಚ್ಚು ಯುವಕರು ಆಗಮಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ತಕ್ಷಣವೇ ಪೊಲೀಸರು ಚದುರಿಸಲು ಪ್ರಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಭಾರಿ ಗಲಾಟೆ ಸೃಷ್ಟಿಸಿದರು. ಅಲ್ಲದೇ, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಬಲದೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.