ಲಕ್ನೋ(ಉತ್ತರ ಪ್ರದೇಶ): ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಅವರ ನಿವಾಸದಲ್ಲಿ ಕೆಲ ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದರು.
ವರದಿಗಳ ಪ್ರಕಾರ, ಇದು ಕಂಗನಾ ರಣಾವತ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ನಡುವಿನ ಸೌಜನ್ಯದ ಭೇಟಿ ಎನ್ನಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಭೇಟಿ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಟಿಗೆ ಅಯೋಧ್ಯೆ ರಾಮಜನ್ಮಭೂಮಿ ಪೂಜೆ ಸಂದರ್ಭದಲ್ಲಿ ಬಳಕೆ ಮಾಡಿದ್ದ ನಾಣ್ಯ ಉಡುಗೊರೆಯಾಗಿ ನೀಡಿದ್ದಾಗಿ ತಿಳಿದು ಬಂದಿದೆ. ಇನ್ನು ಯೋಗಿ ಆದಿತ್ಯನಾಥ್ ಅವರನ್ನ ಭೇಟಿಯಾಗಿರುವುದಕ್ಕೆ ಸಂಬಂಧಿಸಿದಂತೆ ಕಂಗನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಈ ವೇಳೆ ಯೋಗಿ ಆದಿತ್ಯನಾಥ್ ಅವರ ಕಾರ್ಯದ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕಂಗನಾ ರಣಾವತ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ. ಜಯಲಲಿತಾ ಅವರ ಬಯೋಗ್ರಫಿಯಲ್ಲಿ ನಟಿಸಿದ್ದು, ಚಿತ್ರ ಈಗಾಗಲೇ ತೆರೆ ಕಂಡಿದೆ.