ನವದೆಹಲಿ :ಬಾಲಿವುಡ್ ನಟ ಸೋನು ಸೂದ್ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನ ಭೇಟಿಯಾಗಿದ್ದಾರೆ. ಸಿಎಂ ನಿವಾಸದಲ್ಲಿ ಕೇಜ್ರಿವಾಲ್‌ರನ್ನ ಭೇಟಿಯಾಗಿದ್ದು, ಈ ವೇಳೆ ಡಿಸಿಎಂ ಮನೀಶ್ ಸಿಸೋಡಿಯಾ ಸಹ ಉಪಸ್ಥಿತರಿದ್ದರು.
ಕೊರೊನಾದಿಂದ ಹೇರಲಾಗಿದ್ದ ಲಾಕ್ಡೌನ್ ವೇಳೆ ಸೋನು ಸೂದ್ ವಲಸಿಗರು ತಮ್ಮ ನೆಲೆಗಳಿಗೆ ಸೇರಲು ನೆರವಾಗಿದ್ದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಮಿಕರಿಗೆ ನೆರವಾಗಿದ್ದರು. ಆದ್ರೆ, ಸೋನು ಸೂದ್ ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಷ್ಟಾದರೂ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ಸೋನು ಸೂದ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಆರಂಭವಾಗಲಿರುವ ನೂತನ ಯೋಜನೆಗೆ ಸೋನು ಸೂದ್ ರಾಯಭಾರಿಯಾಗಿ ನೇಮಿಸಲು ಸಿಎಂ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ‘ದೇಶ್ ಕೆ ಮೆಂಟರ್’ ಎಂಬ ಅಭಿಯಾನಕ್ಕೆ ಸೋನು ಸೂದ್‌ರನ್ನ ರಾಯಭಾರಿಯಾಗಿ ನೇಮಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಈ ಮನವಿಗೆ ಸೋನು ಒಪ್ಪಿಕೊಂಡಿದ್ದಾರೆ.
‘ದೇಶ್ ಕೆ ಮೆಂಟರ್’ ಎಂಬುದು ಸರ್ಕಾರಿ ಶಾಲೆ ಉಳಿಸಲು ಆರಂಭಿಸಲಾದ ಅಭಿಯಾನವಾಗಿದೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಈ ಅಭಿಯಾನ ನೆರವಾಗಲಿದೆ. ಇನ್ನೊಂದೆಡೆ ಮುಂಬರುವ ಪಂಜಾಬ್ ಚುನಾವಣೆ ದೃಷ್ಟಿಯಿಂದ ಸೋನು ಸೂದ್ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಸಹೋದರಿ ರಾಜಕೀಯ ಎಂಟ್ರಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಂಜಾಬ್ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಆಪ್ ತನ್ನ ಪಕ್ಷ ಬಲವರ್ಧನೆ ಮಾಡಲು ಮುಂದಾಗಿದೆ. ಇದೇ ವೇಳೆ ಸೋನು ಸೂದ್ ಭೇಟಿ ಮಹತ್ವ ಪಡೆದಿದೆ. ಆದರೆ, ರಾಜಕೀಯಕ್ಕೆ ಬರುತ್ತೀರಾ..? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯಕ್ಕೆ ಬರುವ ಯೋಜನೆ ಇಲ್ಲ. ಆದರೆ, ಇದು ರಾಜಕೀಯಕ್ಕಿಂತ ಮುಖ್ಯವಾಗಿದೆ ಎಂದಿದ್ದಾರೆ.