ಅಹಮದಾಬಾದ್:ಗುಜರಾತ್ ಗಲಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಕ್ರೈಂ ಬ್ರಾಂಚ್ ಮಾಜಿ ಡಿಐಜಿ ಸಂಜೀವ್ ಭಟ್, ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಬಿ.ಶ್ರೀಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಸಂಜೀವ್ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲಾಕ್ ಆಫ್ ಡೆತ್ ಪ್ರಕರಣದಲ್ಲೂ ಭಟ್ ದೋಷಿಯಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ.
2022ರ ಗುಜರಾತ್ ಗಲಭೆ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ತೀಸ್ತಾ ಸೆಟಲ್ವಾಡ್ ಎನ್‌ಜಿಒ ನಡೆಸುತ್ತಿದ್ದಾರೆ. ಈ ಎನ್‌ಜಿಒಗೆ ವಿದೇಶಗಳಿಂದ ಅಕ್ರಮವಾಗಿ ಹಣ ಬಂದಿದೆ. ಈ ಕುರಿತು ತನಿಖೆ ನಡೆಸಿದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದೆ. ಈ ಮೂವರೂ 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸುವಂತಹ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾಗುವಂತೆ ಅನೇಕ ವ್ಯಕ್ತಿಗಳ ವಿರುದ್ಧ ಸುಳ್ಳು ಪುರಾವೆಗಳನ್ನು ಸೃಷ್ಟಿಸುವ ಮೂಲಕ ಕಾನೂನಿನ ದುರ್ಬಳಕೆ ಮಾಡುವಲ್ಲಿ ಸಂಚು ನಡೆಸಿದ್ದರು ಎಂದು ಅಹಮದಾಬಾದ್ ಅಪರಾಧ ದಳ ವಿಭಾಗದ ಇನ್‌ಸ್ಪೆಕ್ಟರ್ ಡಿ.ಬಿ ಬರಾದ್ ದೂರು ದಾಖಲಿಸಿದ್ದಾರೆ.