ಪಾಟ್ನಾ (ಬಿಹಾರ) : ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಪಾಟ್ನಾದ ಬಿಹ್ತಾ ಎಂಬಲ್ಲಿ ಸೋಮವಾರ ನಡೆದಿತ್ತು. ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳು ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋದಲ್ಲಿ ದುಷ್ಕರ್ಮಿಗಳ ಗುಂಪೊಂದು ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದನ್ನು ಕಾಣಬಹುದು. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣ ಸಂಬಂಧ 3 ಎಫ್ಐಆರ್ ದಾಖಲಿಸಿರುವ ಪೊಲೀಸರು ಒಟ್ಟು 44 ಜನರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ರಮಾನಂದ್ ಯಾದವ್, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇವೆ. ಬಳಿಕ ಏನು ಕ್ರಮ ಕೈಗೊಳ್ಳಬೇಕು. ಅದನ್ನು ಕೈಗೊಳ್ಳುತ್ತೇವೆ. ಸದ್ಯ ಪೊಲೀಸರು 45 ಜನರನ್ನು ಬಂಧಿಸಿದ್ದು, ಸುಮಾರು 50 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನಗಳ ಮಾಲೀಕರ ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಘಟನೆಯಲ್ಲಿ ಜಿಲ್ಲಾ ಗಣಿ ಇಲಾಖೆ ಮಹಿಳಾ ಅಧಿಕಾರಿ ಮತ್ತು ಇಬ್ಬರು ಗಣಿ ನಿರೀಕ್ಷಕರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ದಾಳಿ:ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ಬಿಹಾರದಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾ ಹೆಚ್ಚಾಗಿದೆ. ಸರ್ಕಾರವು ಪೊಲೀಸರನ್ನು ಕಟ್ಟಿ ಹಾಕಿದೆ ಎಂದು ಆರೋಪಿಸಿದವು.