ವಾರಂಗಲ್ (ತೆಲಂಗಾಣ): ಹೈದರಾಬಾದ್ ಸಮೀಪ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಹರಿಹರಕೃಷ್ಣನ ತಂದೆ ಪ್ರಭಾಕರ್ ಪ್ರತಿಕ್ರಿಯಿಸಿದ್ದು, ಕೊಲೆಯಾದ ನವೀನ್‌ನ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ನನ್ನ ಮಗ ತಪ್ಪು ಮಾಡಿದ್ದಾನೆ. ಆದರೆ, ನನ್ನ ಮಗನೊಬ್ಬನೇ ಈ ಕೊಲೆ ಮಾಡಲು ಸಾಧ್ಯವಿಲ್ಲ. ಕೊಲೆಯ ಹಿಂದೆ ಬೇರೆಯವರ ಕೈವಾಡವೂ ಇದೆ ಎಂದು ಅವರು ಆರೋಪಿಸಿದ್ದಾರೆ.
ಹತ್ಯೆಯಾದ ನವೀನ್ ಮತ್ತು ಆರೋಪಿ ಹರಿಹರಕೃಷ್ಣ ಇಬ್ಬರೂ ಸ್ನೇಹಿತರಾಗಿದ್ದರು. ಆದರೆ, ಯುವತಿ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯವಾಗಿ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೀನ್‌ನನ್ನು ಸ್ನೇಹಿತ ಹರಿಹರಕೃಷ್ಣ ಕೊಲೆ ಮಾಡಿದ್ದ. ಈ ಸಂಬಂಧ ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನವೀನ್ ಮತ್ತು ಆರೋಪಿ ಹರಿಹರಕೃಷ್ಣ ಇದೀಗ ಆರೋಪಿ ಹರಿಹರಕೃಷ್ಣ ತಂದೆ ಪ್ರಭಾಕರ್ ಮಾತನಾಡಿದ್ದು, ಒಬ್ಬ ಹುಡುಗಿಯಿಂದಾಗಿ ಈ ಇಬ್ಬರು ಯುವಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಒಬ್ಬ ಕೊಲೆಗೀಡಾದರೆ, ಮತ್ತೊಬ್ಬ ಜೈಲು ಪಾಲಾಗಿದ್ದಾನೆ. ಆದರೆ, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ತನ್ನ ಮಗನೊಬ್ಬನೇ ಇಷ್ಟೊಂದು ಅಮಾನುಷವಾಗಿ ಕೊಲೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸರು ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪೊಲೀಸರಿಗೆ ಶರಣಾಗಲು ಹೇಳಿದ್ದೆ: ಶಿವರಾತ್ರಿ ಹಬ್ಬದ ದಿನ ಹರಿಹರ ಕೃಷ್ಣ ವಾರಂಗಲ್‌ಗೆ ಬಂದಿದ್ದ. ಆ ದಿನ ಹಲವು ದೂರವಾಣಿ ಕರೆಗಳು ಅವನಿಗೆ ಬರುತ್ತಿದ್ದವು. ಆಗಲೇ ನನಗೆ ಅನುಮಾನ ಬಂದು ಏನೋ ತಪ್ಪು ನಡೆದಿದೆ ಎಂದು ಮಗನನ್ನು ಪ್ರಶ್ನಿಸಿದ್ದೆ. ಆದರೆ, ಆಗ ಅವನು ಏನೂ ಆಗಿಲ್ಲ ಎಂದು ವಾರಂಗಲ್ನಿಂದ ಹೈದರಾಬಾದ್ಗೆ ಹೊರಟ. ಇದಾದ ಬಳಿಕ ಎರಡು ದಿನ, ಅವನ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಪ್ರಭಾಕರ್ ಇದೇ ವೇಳೆ ತಿಳಿಸಿದರು.
ಇದರ ನಂತರ ನವೀನ್ ನಾಪತ್ತೆ ಬಗ್ಗೆ ಆತನ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿ ನಮಗೆ ತಿಳಿಯಿತು. ಇದೇ ವೇಳೆ ನನ್ನ ಮಗ ಕೂಡ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನವೀನ್ ಕುಟುಂಬಸ್ಥರು ನೀಡಿದ್ದಾರೆ ಎಂಬುದು ಗೊತ್ತಾಯಿತು. ನಂತರದಲ್ಲಿ ಫೆ.23ರಂದು ವಾರಂಗಲ್‌ಗೆ ಹರಿಹರಕೃಷ್ಣ ಬಂದಿದ್ದ ಎಂದರು.
ಮತ್ತೊಂದೆಡೆ, ನನ್ನ ಮಗನಿಗೆ ಏನಾಗಿದೆ ಎಂದು ಕೇಳಿದಾಗ, ಅವನು ತುಂಬಾ ಟೆನ್ಶನ್ನಲ್ಲಿದ್ದ. ನಂತರ ನವೀನ್ ಕುರಿತು ವಿಷಯ ತಿಳಿಸಿ, ಜಗಳವಾಡಿ ನವೀನ್‌ನನ್ನು ಕೊಲೆ ಮಾಡಿರುವ ವಿಷಯವನ್ನು ಹೇಳಿದ. ನಾನು ಅವನ ಮಾತು ಕೇಳಿ ಬೆಚ್ಚಿಬಿದ್ದೆ. ಅಲ್ಲದೇ, ಪೊಲೀಸರಿಗೆ ಶರಣಾಗಲು ನಾನೇ ಹೇಳಿದ್ದೆ. ಅದರಂತೆ, ಫೆ.24ರಂದು ಪೊಲೀಸರಿಗೆ ಶರಣಾಗುವುದಾಗಿ ಹರಿಹರಕೃಷ್ಣ ಹೇಳಿದ್ದ ಎಂದು ತಂದೆ ಪ್ರಭಾಕರ್ ಮಾಹಿತಿ ನೀಡಿದರು.
ಇದನ್ನೂ ಓದಿ:ತಾನು ಪ್ರೀತಿಸುತ್ತಿದ್ದ ಯುವತಿಗೆ ಕ್ಲೋಸ್ ಆದ ಸ್ನೇಹಿತ: ಗೆಟ್ ಟುಗೆದರ್ಗೆಂದು ಕರೆದು ಭೀಭತ್ಸವಾಗಿ ಕೊಂದ ಗೆಳೆಯ
ಏನಿದು ಪ್ರಕರಣ?:ಬೋಡುಪ್ಪಲ್‌ನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಅಂತಿಮ ವರ್ಷದಲ್ಲಿ ಹರಹರಕೃಷ್ಣ ಓದುತ್ತಿದ್ದ. ಇತ್ತ, ನಲ್ಗೊಂಡದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ನವೀನ್ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ, ಈ ಹಿಂದೆ ದಿಲ್‌ಸುಖ್‌ನಗರದ ಖಾಸಗಿ ಜೂನಿಯರ್ ಕಾಲೇಜಿನಲ್ಲಿ ಹರಹರಕೃಷ್ಣ, ನವೀನ್ ಮತ್ತು ಓರ್ವ ಯುವತಿ ಸಹಪಾಠಿಗಳಾಗಿದ್ದರು.
ಇದೇ ವೇಳೆ ನವೀನ್ ಮತ್ತು ಹರಹರಕೃಷ್ಣ ಇಬ್ಬರೂ ಈ ಯುವತಿಯನ್ನು ಪ್ರೀತಿಸುತ್ತಿದ್ದರು. ಅಲ್ಲದೇ, ಯುವತಿಗೆ ನವೀನ್ ಮೇಲೆ ಹೆಚ್ಚು ಒಲವು ಇತ್ತು. ಇದನ್ನು ಸಹಿಸಿಕೊಳ್ಳಲು ಆಗದೇ ಹರಹರಕೃಷ್ಣ ಫೆಬ್ರವರಿ 17ರಂದು ನವೀನ್‌ನನ್ನು ನಿಗೂಢವಾಗಿ ಹತ್ಯೆ ಮಾಡಿದ್ದ. ಮತ್ತೊಂದೆಡೆ, ನವೀನ್ ಸುಳಿವು ಸಿಗದ ಕಾರಣ ಫೆ.22ರವರೆಗೆ ಕುಟುಂಬಸ್ಥರು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದರ ನಂತರ ಈ ಕೊಲೆ ಬಯಲಿಗೆ ಬಂದಿತ್ತು.