ನವದೆಹಲಿ:ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಗೋಯಲ್ ಅವರು ಎಲ್ಲರ ಮುಂದೆ ಲಂಚದ ನೋಟುಗಳ ಬಂಡಲ್ ತೋರಿಸಿದ್ದಾರೆ. ಜೊತೆಗೆ, ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಣವನ್ನು ತೆಗದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ ಒಟ್ಟು 15 ಲಕ್ಷ ರೂ ನಗದನ್ನು ಶಾಸಕರ ಸಭೆಗೆ ತಂದಿದ್ದರು ಎನ್ನಲಾಗಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕಕ್ಕೆ ಗುತ್ತಿಗೆದಾರರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಸಭಾ ಸ್ಪೀಕರ್ ರಾಮ್ನಿವಾಸ್ ಗೋಯಲ್ ಅವರಿಗೆ ಶಾಸಕರು ಮಾಹಿತಿ ನೀಡಿದರು. ಗುತ್ತಿಗೆದಾರರ ಮಾಫಿಯಾದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೇದರಿಕೆಯಿದೆ, ಜೀವ ಭಯದಿಂದ ಇಂದು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಆಪ್ ಶಾಸಕ ಮಹೇಂದ್ರ ಗೋಯಲ್ ಹೇಳಿದ್ದಾರೆ.
ಈ ಕುರಿತು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿಧಾನಸಭೆ ಸ್ಪೀಕರ್ ರಾಮ್ನಿವಾಸ್ ಗೋಯಲ್ ಅವರು ಎಎಪಿ ಶಾಸಕರಿಗೆ ಈ ಅಕ್ರಮದ ಬಗ್ಗೆ ಲಿಖಿತ ದೂರು ಮತ್ತು ಸಂಪೂರ್ಣ ಪ್ರಕರಣದ ಸಾಕ್ಷ್ಯವನ್ನು ನೀಡುವಂತೆ ಕೇಳಿದ್ದಾರೆ. ಈ ಪ್ರಕರಣವನ್ನು ವಿಧಾನಸಭೆಯ ಅರ್ಜಿ ಸಮಿತಿಗೆ ತನಿಖೆಗೆ ಕಳುಹಿಸಲಾಗುವುದು ಎಂದು ಸ್ವೀಕರ್ ಭರವಸೆ ನೀಡಿದರು.
ದೆಹಲಿ ವಿಧಾನಸಭೆಯ ಮೂರನೇ ದಿನವಾದ ಬುಧವಾರ, ನಿಯಮ 280ರ ವಿಶೇಷ ಉಲ್ಲೇಖದ ಅಡಿ, ಶಾಸಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ, ಮಹೇಂದ್ರ ಗೋಯಲ್ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದರು.