ಮಾಧೇಪುರ (ಬಿಹಾರ): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಶಿರಚ್ಛೇದ ಮಾಡಿ ಹತ್ಯೆಗೈದ ಭೀಕರ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ, ಕೊಲೆ ಮಾಡಿದ ಬಳಿಕ ಪತ್ನಿಯ ತಲೆಯನ್ನು ತೆಗೆದುಕೊಂಡು ಹೋಗಿ ಅತ್ತೆ-ಮಾವನ ಮನೆಯ ಸಮೀಪದ ಮೋರಿಗೆ ಎಸೆದು ಪರಾರಿಯಾಗಿದ್ದಾನೆ.
ಇಲ್ಲಿನ ಶ್ರೀನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೋಖಾರಿಯಾ ಟೋಲಾ ಗ್ರಾಮದಲ್ಲಿ ಈ ಬರ್ಬರ ಘಟನೆ ಜರುಗಿದೆ. ಮುರ್ಷಿದಾ ಖಾತೂನ್ ಹಾಗೂ 3 ವರ್ಷದ ಮಗಳು ಜಿಯಾ ಪರ್ವೀನ್ ಎಂಬುವವರೇ ಕೊಲೆಯಾದವರು. ಮೊಹಮ್ಮದ್ ಆಲಂ ಎಂಬಾತನೇ ಪತಿ ಹಾಗೂ ಪುತ್ರಿಯ ತಲೆಯನ್ನು ಹರಿತವಾದ ಆಯುಧದಿಂದ ಕಡಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೊಹಮ್ಮದ್ ಆಲಂ ಮತ್ತು ಮುರ್ಷಿದಾ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ಚಿಕ್ಕಪ್ಪನ ಮನೆಯಲ್ಲಿ ಓದುತ್ತಿದ್ದು, ಮಗಳು ಮಾತ್ರ ಪೋಷಕರೊಂದಿಗೆ ವಾಸವಾಗಿದ್ದಳು. ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೀಗ ಪತ್ನಿಯ ಅಕ್ರಮ ಸಂಬಂಧದ ಶಂಕೆಯಿಂದ ಆರೋಪಿ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.