ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಂಬತ್ತು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಇಂದು ಪ್ರಾರಂಭಿಸಲಾಗುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಾರಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿವೆ ಮತ್ತು ಭಾರತದಾದ್ಯಂತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಎಂದು ಹೇಳಿದರು. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸರ್ಕಾರವು ಬಹು ಮಾದರಿಯ ಸಂಪರ್ಕ ಮತ್ತು ಸುಲಭ ಪ್ರಯಾಣದ ಮೇಲೆ ಗಮನ ಹರಿಸುತ್ತಿದೆ ಎಂದು ತಿಳಿಸಿದರು.
"ಈ ಮೂಲಸೌಕರ್ಯ ಅಭಿವೃದ್ಧಿಯು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಪೂರಕವಾಗಿದೆ ಮತ್ತು ದೇಶ ಈಗ ಇದನ್ನೇ ಬಯಸುತ್ತಿದೆ." ಎಂದು ಪ್ರಧಾನಿ ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ "ಕಳೆದ 9 ವರ್ಷಗಳಲ್ಲಿ, ಪ್ರಧಾನಿ ಮೋದಿ ರೈಲ್ವೆ ವ್ಯವಸ್ಥೆಯನ್ನು ಅಸಾಧಾರಣವಾಗಿ ಪರಿವರ್ತಿಸಿದ್ದಾರೆ. ಇಂದು ರೈಲ್ವೆ ನಿಲ್ದಾಣಗಳು ಹೊಸ ಸೌಲಭ್ಯಗಳೊಂದಿಗೆ ಸ್ವಚ್ಛವಾಗಿ ಕಂಗೊಳಿಸುತ್ತಿವೆ" ಎಂದು ಹೇಳಿದರು.
ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ 11 ರಾಜ್ಯಗಳಿಗೆ ವೇಗದ ಸಂಪರ್ಕ ಕಲ್ಪಿಸುತ್ತವೆ.
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್, ತಿರುನೆಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್, ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್, ವಿಜಯವಾಡ-ಚೆನ್ನೈ (ರೇಣಿಗುಂಟ ಮೂಲಕ), ವಂದೇ ಭಾರತ್ ಎಕ್ಸ್ಪ್ರೆಸ್, ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್, ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್, ರೂರ್ಕೆಲಾ-ಭುವನೇಶ್ವರ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್, ರಾಂಚಿ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಜಾಮ್ ನಗರ-ಅಹಮದಾಬಾದ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.
ರೂರ್ಕೆಲಾ-ಭುವನೇಶ್ವರ-ಪುರಿ ಮತ್ತು ಕಾಸರಗೋಡು-ತಿರುವನಂತಪುರಂ ಮಾರ್ಗದ ಪ್ರಸ್ತುತ ವೇಗದ ರೈಲುಗಳಿಗೆ ಹೋಲಿಸಿದರೆ, ವಂದೇ ಭಾರತ್ ರೈಲುಗಳು ಆಯಾ ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಷ್ಟು ಕಡಿಮೆ ಮಾಡುತ್ತವೆ. ಹೈದರಾಬಾದ್-ಬೆಂಗಳೂರು ನಡುವಿನ ಪ್ರಯಾಣವನ್ನು 2.5 ಗಂಟೆ ಮತ್ತು ತಿರುನೆಲ್ವೇಲಿ-ಮಧುರೈ-ಚೆನ್ನೈ ಮಾರ್ಗದ ಪ್ರಯಾಣವನ್ನು 2 ಗಂಟೆಗಳಿಗಿಂತ ಹೆಚ್ಚು ಕಡಿತಗೊಳಿಸುತ್ತವೆ.
ಅದೇ ರೀತಿ ರಾಂಚಿ-ಹೌರಾ ಮತ್ತು ಪಾಟ್ನಾ-ಹೌರಾ ಮತ್ತು ಜಾಮ್ ನಗರ್-ಅಹಮದಾಬಾದ್ ನಡುವಿನ ಪ್ರಯಾಣದ ಸಮಯವು ಪ್ರಸ್ತುತ ಈ ಸ್ಥಳಗಳ ನಡುವೆ ಲಭ್ಯವಿರುವ ವೇಗದ ರೈಲುಗಳಿಗೆ ಹೋಲಿಸಿದರೆ ಸುಮಾರು ಒಂದು ಗಂಟೆ ಕಡಿಮೆಯಾಗುತ್ತದೆ. ಉದಯಪುರ - ಜೈಪುರ ನಡುವಿನ ಪ್ರಯಾಣದ ಸಮಯವು ಸುಮಾರು ಅರ್ಧ ಗಂಟೆ ಕಡಿಮೆಯಾಗುತ್ತದೆ. ರೂರ್ಕೆಲಾ-ಭುವನೇಶ್ವರ-ಪುರಿ ಮತ್ತು ತಿರುನೆಲ್ವೇಲಿ-ಮಧುರೈ-ಚೆನ್ನೈ ರೈಲುಗಳು ಪ್ರಮುಖ ಧಾರ್ಮಿಕ ಪಟ್ಟಣಗಳಾದ ಪುರಿ ಮತ್ತು ಮಧುರೈಗಳನ್ನು ಸಂಪರ್ಕಿಸಲಿವೆ.
ಇದನ್ನೂ ಓದಿ :'ಬಿಜೆಪಿ ಮೇಲಿನ ನನ್ನ ದ್ವೇಷವನ್ನು ಮಾತೆ ಮೇರಿ ಬದಲಾಯಿಸಿದರು': ಎ.ಕೆ.ಆ್ಯಂಟನಿ ಪತ್ನಿ ಎಲಿಜಬೆತ್ ಆ್ಯಂಟನಿ