ರಾಜಸ್ಥಾನ: ಸಾಮಾನ್ಯವಾಗಿ ಮದುವೆ ಅಂದ್ರೆನೇ ಸಂಭ್ರಮ, ಸಂತಸ, ಸಡಗರ. ಆದ್ರೆ ಈ ಮನೆಯಲ್ಲಿ ಇವೆಲ್ಲವೂ ನೂರುಪಟ್ಟು ಹೆಚ್ಚಿತ್ತು. ಏಕೆಂದ್ರೆ ಒಂದೇ ಮಂಟಪದಲ್ಲಿ 6 ಜನ ಸಹೋದರಿಯರು ಹಸೆಮಣೆ ಏರಿದ್ರು.
ಹೌದು, ಇದೊಂದು ವಿಶೇಷ ಮದುವೆ. ರಾಜಸ್ಥಾನದ ಝುಂಝುನು ಜಿಲ್ಲೆಯ ಚಿರಾನಿ ಗ್ರಾಮ ಇದಕ್ಕೆ ಸಾಕ್ಷಿಯಾಯ್ತು. ಒಂದೇ ಮಂಟದಲ್ಲಿ ಒಂದು, ಎರಡು ಮದುವೆ ನೋಡಿದ್ದವರು ಇಲ್ಲಿ ಒಟ್ಟಿಗೆ 6 ಸಹೋದರಿಯರ ಮದುವೆ ನೋಡಿ ಖುಷಿ ಪಟ್ಟರು. ಇನ್ನು ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಒಟ್ಟಿಗೆ 6 ಜನ ಪುತ್ರಿಯರ ಮದುವೆ ಮಾಡಿದ ಅಪ್ಪ:
ಶಾಲಾ ವಾಹನ ಚಾಲಕರಾಗಿರುವ ರೋಹಿತಾಶ್ವ್ ಅವರಿಗೆ 7 ಜನ ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾನೆ. ಇದರಲ್ಲಿ ಆರು ಜನ ಪುತ್ರಿಯರ ಮದುವೆಯನ್ನು ಅದ್ಧೂರಿಯಾಗಿ ಒಟ್ಟಿಗೆ ಮಾಡಿದ್ದಾರೆ. ಮೂರು ಬೇರೆ ಬೇರೆ ಗ್ರಾಮಗಳಲ್ಲಿರುವ ಮೂರು ಕುಟುಂಬಗಳಿಗೆ ತಮ್ಮ ಮಕ್ಕಳನ್ನು ಧಾರೆ ಎರೆದು ಕೊಟ್ಟಿದ್ದಾರೆ. ಪ್ರತಿ ಕುಟುಂಬಕ್ಕೆ ಇಬ್ಬರು ಮಕ್ಕಳು ಮದುವೆ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಮದುವೆಗೆ ಮೂರು ಗ್ರಾಮಗಳಿಂದ ಜನರು ಆಗಮಿಸಿದ್ದರು.