ಫಿರೋಜಾಬಾದ್ (ಉತ್ತರ ಪ್ರದೇಶ):42 ವರ್ಷಗಳ ಹಿಂದೆ (1981) 10 ಮಂದಿ ದಲಿತರನ್ನು ಹತ್ಯೆಗೈದ ಪ್ರಕರಣದಲ್ಲಿ 90 ವರ್ಷ ವಯಸ್ಸಿನ ಆರೋಪಿಯೊಬ್ಬನನ್ನು ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ ಬುಧವಾರ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ 9 ಆರೋಪಿಗಳು ಸಾವನ್ನಪ್ಪಿದ್ದಾರೆ. 90 ವರ್ಷದ ವ್ಯಕ್ತಿ ಮಾತ್ರ ಜೀವಂತವಾಗಿ ಉಳಿದಿದ್ದು, ಜೀವಾವಧಿ ಶಿಕ್ಷೆಯೊಂದಿಗೆ ನ್ಯಾಯಾಲಯ ಅಪರಾಧಿಗೆ 55,000 ರೂಪಾಯಿ ದಂಡವನ್ನೂ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಹೆಚ್ಚುವರಿಯಾಗಿ 13 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
1981ರಲ್ಲಿ ಫಿರೋಜಾಬಾದ್‌ನ ಸಾಧುಪುರ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ತು ಜನ ದಲಿತರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಇಬ್ಬರು ಮಹಿಳೆಯರೂ ಕೂಡ ಗಾಯಗೊಂಡಿದ್ದರು. ಪೊಲೀಸ್ ಪ್ರಕರಣ ದಾಖಲಾಗಿತ್ತು. ತಪ್ಪಿತಸ್ಥರಲ್ಲಿ ಗಂಗಾದಯಾಳ್ ಅವರ ಹೆಸರು ಸೇರಿತ್ತು. ನಂತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307 ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಶಿಕೋಹಾಬಾದ್ ಪೊಲೀಸರು ಹತ್ತು ಆರೋಪಿಗಳ ವಿರುದ್ಧ ಮೈನ್‌ಪುರಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, 9 ಜನ ಆರೋಪಿಗಳು ವಿಚಾರಣೆ ವೇಳೆ ಸಾವನ್ನಪ್ಪಿದ್ದು, ಕೇವಲ ಗಂಗಾದಯಾಳ್ ಮಾತ್ರ ಜೀವಂತವಾಗಿದ್ದಾರೆ. ಸದ್ಯ ಗಂಗಾದಯಾಳ್ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಆರಂಭದಲ್ಲಿ ಪ್ರಕರಣವನ್ನು ಮೈನ್‌ಪುರಿಯಲ್ಲಿ ವಿಚಾರಣೆ ಮಾಡಲಾಗುತ್ತಿತ್ತು. ಫಿರೋಜಾಬಾದ್ ಪ್ರತ್ಯೇಕ ಜಿಲ್ಲೆಯಾದ ನಂತರ ಪ್ರಕರಣವನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂದು ವಕೀಲ ಉಪಾಧ್ಯಾಯ ಮಾಹಿತಿ ನೀಡಿದರು.
ಸಂತ್ರಸ್ತರಲ್ಲಿ ಒಬ್ಬರಾದ ಮಹಾರಾಜ್ ಸಿಂಗ್ ಎನ್ನುವವರು ಪ್ರತಿಕ್ರಿಯಿಸಿ, ಒಟ್ಟು ಹತ್ತು ಜನರ ಆರೋಪಿಗಳು ಕೃತ್ಯ ಎಸಗಿದ್ದರು. 42 ವರ್ಷಗಳ ನಂತರ ಉಳಿದಿರುವ ಏಕೈಕ ಅಪರಾಧಿಗೆ ಶಿಕ್ಷೆಯಾಗಿದೆ. ನನ್ನ ಕುಟುಂಬದ ಹಿರಿಯರು ಜೀವಂತವಾಗಿರುವಾಗ ಇತರೆ 9 ಮಂದಿಗೆ ಶಿಕ್ಷೆ ನೀಡಿದ್ದರೆ ಉತ್ತಮವಾಗಿತ್ತು ಎಂದು ಹೇಳಿದರು.