ಪುಣೆ(ಮಹಾರಾಷ್ಟ್ರ):ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ 4 ಮಂದಿ ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಕಾಟ್ರಾಜ್ ಘಾಟ್ ಬಳಿಯ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಇಂದು ನಸುಕಿನಜಾವ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಅಪಘಾತದ ಮಾಹಿತಿ ಪಡೆದ ಕಾಟ್ರಾಜ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಪ್ರಯಾಣಿಕರ ಬಸ್ ಕೊಲ್ಹಾಪುರದಿಂದ ಮುಂಬೈನ ಡೊಂಬಿವಿಲಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಟ್ರಕ್ ಬಸ್ಗೆ ಡಿಕ್ಕಿ ಹೊಡಿದೆ. ಟ್ರಕ್‌ನ ಬ್ರೇಕ್ ಫೇಲ್ ಆಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಟ್ರಕ್‌ನ ಕ್ಯಾಬಿನ್ ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಪ್ರಯಾಣಿಕರು ಗಾಢ ನಿದ್ದೆಯಲ್ಲಿದಾಗ ಅವಘಡ ಸಂಭವಿಸಿದೆ. ಬಸ್ನಲ್ಲಿ ಒಟ್ಟು 21 ಮಂದಿ ಪ್ರಯಾಣಿಕರು ಓರ್ವ ಚಾಲಕ ಮತ್ತು ಓರ್ವ ಕ್ಲೀನರ್ ಇದ್ದರು. ಟ್ರಕ್ನಲ್ಲಿ ಚಾಲಕ ಸೇರಿ ಮೂರು ಮಂದಿ ಇದ್ದರು. ಅಪಘಾತದ ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದರು. ಗಾಯಗೊಂಡ 22 ಮಂದಿಯಲ್ಲಿ 19 ಮಂದಿ ಬಸ್ ಪ್ರಯಾಣಿಕರಾಗಿದ್ದರೆ, ಮೂವರು ಟ್ರಕ್‌ನಲ್ಲಿದ್ದವರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.