ಅಜ್ಮೀರ್(ರಾಜಸ್ಥಾನ): ಬರವಣಿಗೆಯಲ್ಲಿ ಯಾವುದೇ ವೃತ್ತಿಪರ ಪರಿಣಿತಿ ಇಲ್ಲದ ರಾಜಸ್ಥಾನದ ಅಜ್ಮೀರ್‌ನ ಮಹಿಳೆಯೊಬ್ಬರು 21 ಗಂಟೆಗಳಲ್ಲಿ 30,000 ಪದಗಳ ಪುಸ್ತಕ (ಕವನ ಸಂಗ್ರಹ) ಬರೆದು ವಿಶ್ವ ದಾಖಲೆ ಮಾಡಿದ್ದಾರೆ. ಅವರ ಈ ಸಾಧನೆ ಹಾರ್ವರ್ಡ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಪಟ್ಟಣದ ಪಂಚಶೀಲ ಪ್ರದೇಶದ ಕರ್ಣಿ ನಗರದಲ್ಲಿ ವಾಸಿಸುತ್ತಿರುವ ರಿಯಾ ರಘಾನಿ ಕೃಷ್ಣ ಭಕ್ತೆ. ವಿಭಿನ್ನವಾದದ್ದನ್ನು ಮಾಡುವ ಬಯಕೆಯಲ್ಲಿ ಆಕೆ ಬರಹಗಾರ್ತಿಯಾಗಿದ್ದಾರೆ. ಜುಲೈ 21 ರಂದು ಸಂಜೆ 6.21ಕ್ಕೆ ಗೋವರ್ಧನ ಪರಿಕ್ರಮ ಮಾರ್ಗದ ರಾಧಾ ಕೃಷ್ಣ ಕುಂಡ್ ನಡುವಿನ ಗೋವರ್ಧನ ದೇವಸ್ಥಾನದಲ್ಲಿ ಕುಳಿತು ಪುಸ್ತಕ ಬರೆಯಲು ಪ್ರಾರಂಭಿಸಿದರು. ಮರುದಿನ ಸಂಜೆ ನಿಗದಿತ ಸಮಯದೊಳಗೆ ಕೆಲಸವನ್ನು ಪೂರ್ಣಗೊಳಿಸಿದರು. ರಿಯಾ ಅವರು 21 ಗಂಟೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಪದಗಳನ್ನು 'ಅಧ್ಯಾತ್ಮಿಕ ಶಕ್ತಿ' ಎಂಬ ಶೀರ್ಷಿಕೆಯಲ್ಲಿ ಬರೆದು ಕವಿತೆಯ ರೂಪ ನೀಡಿದ್ದಾರೆ.
ಹಾರ್ವರ್ಡ್ ವರ್ಲ್ಡ್ ರೆಕಾರ್ಡ್ ಹಾರ್ವರ್ಡ್ ತಂಡ ಮೊದಲು ಕೇವಲ 21 ಗಂಟೆಗಳ ಗಡುವು ನಿಗದಿಪಡಿಸಿತ್ತು. ಬಳಿಕ ಆಕೆ 24 ಗಂಟೆಗಳ ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. ಪುಸ್ತಕ ಬರೆಯಲು ಅವರು 24 ಗಂಟೆ 30 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಮೇಲ್ವಿಚಾರಣೆ:ಹಾರ್ವರ್ಡ್ ವರ್ಲ್ಡ್ ರೆಕಾರ್ಡ್ ತಂಡ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಅನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಇದಲ್ಲದೇ ನಿರಂತರ ಬರವಣಿಗೆಯ ಕೆಲಸದ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿತ್ತು. ಬರೆಯುವ ಮೊದಲು, ಹಾರ್ವರ್ಡ್ ವರ್ಲ್ಡ್ ರೆಕಾರ್ಡ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ದಾಖಲೆಗಾಗಿ ನೋಂದಣಿ ಮಾಡಲಾಗಿತ್ತು. ಆ ಬಳಿಕ ನಿಗದಿತ ವೇಳಾಪಟ್ಟಿಯಂತೆ ಬರವಣಿಗೆ ಕಾರ್ಯ ನಡೆದಿದೆ ಎಂದು ವರದಿಯಾಗಿದೆ.
ಶೀಘ್ರವೇ ಕೃತಿ ಪ್ರಕಟ: 'ಪುಸ್ತಕ ಬರೆಯುವಷ್ಟು ಶಕ್ತಿ ನನಗಿಲ್ಲ, ಆದರೆ ನನ್ನ ಮೇಲೆ ನನ್ನ ಕೃಷ್ಣನ ಅಪಾರ ಕೃಪೆಯಿಂದ ಅದು ಸಾಧ್ಯವಾಯಿತು'. ಈ ಬರವಣಿಗೆಯ ಮಧ್ಯೆ ನನಗೆ ಅನೇಕ ರೀತಿಯ ಅಧ್ಯಾತ್ಮಿಕ ಅನುಭವವಾಯಿತು. ಮುಂದೆ ಬರೆಯಲು ಯಾರೋ ಒಂದು ಅಧ್ಯಾಯವನ್ನು ಹೇಳುತ್ತಿರುವಂತೆ ಭಾಸವಾಯಿತು. ಶೀಘ್ರವೇ ಈ ಕೃತಿ ಪ್ರಕಟವಾಗಲಿದೆ' ಎಂದು ರಿಯಾ ಹೇಳಿದರು. ಭಗವದ್ಗೀತೆಯಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಅದು ನನ್ನ ಜೀವನದ ಭಾಗವಾಗಿದೆ. ಕಳೆದ ಎಂಟು ವರ್ಷಗಳಿಂದ ಪ್ರತಿ ತಿಂಗಳು ವೃಂದಾವನದಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡುತ್ತೇನೆ. ಯಾವುದೇ ಪ್ರತಿಕೂಲ ಸಂದರ್ಭಗಳನ್ನು ಎದುರಿಸಲು ಮತ್ತು ಜೀವನದಲ್ಲಿ ಕಠಿಣ ಸವಾಲನ್ನು ಎದುರಿಸುವುದನ್ನು ಆಧ್ಯಾತ್ಮಿಕತೆ ಕಲಿಸಿದೆ ಎಂದು ಅವರು ಹೇಳಿದರು.
ಆಧ್ಯಾತ್ಮಿಕತೆಯಿಂದ ಪಡೆದ ಸಂತೋಷ ಶಾಶ್ವತ: "ಲೌಕಿಕ ಸಂತೋಷ ಕ್ಷಣಿಕವಾಗಿದೆ. ಆದರೆ, ಆಧ್ಯಾತ್ಮಿಕತೆಯಿಂದ ಪಡೆದ ಸಂತೋಷ ಶಾಶ್ವತ. ಇದು ನನ್ನ ಕೆಲಸವನ್ನು ಪ್ರಾರಂಭಿಸುವ ಮೊದಲು ಪ್ರತಿದಿನ ಬೆಳಗ್ಗೆ ಭಗವದ್ಗೀತೆ ಓದುವುದರಿಂದ ನಾನು ಕಲಿತ ಸಾರ. ಇಸ್ಕಾನ್‌ನಲ್ಲಿರುವ ನನ್ನ ಅಧ್ಯಾತ್ಮಿಕ ಗುರುಗಳು ನನಗೆ ಪ್ರೇರಣೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಬೋಧನೆಗಳನ್ನು ನನ್ನ ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತು ದೃಢವಾದ ಮನಸ್ಸನ್ನು ಹೊಂದಿ ನನ್ನ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿತು. ಈ ಪುಸ್ತಕ ನನ್ನ ಅಧ್ಯಾತ್ಮಿಕ ಭಾವಪರವಶತೆ ಮತ್ತು ಅತೀಂದ್ರಿಯ ಎಲ್ಲ ಕಥೆಗಳನ್ನು ಒಳಗೊಂಡಿದೆ" ಎಂದು ರಿಯಾ ವಿವರಿಸಿದರು.
ಭಗವದ್ಗೀತೆಯನ್ನು ಓದಿದ ನಂತರ, ಪುಸ್ತಕ ಬರೆಯುವ ಬಯಕೆ ಹುಟ್ಟಕೊಂಡಿತು. ನನ್ನ ಯಶಸ್ಸಿಗೆ ಪತಿ, ಕುಟುಂಬ, ಮಾರ್ಗದರ್ಶಕರು ಮತ್ತು ಕೆಲವು ಸ್ನೇಹಿತರು ಬೆಂಬಲಿಸಿದ್ದಾರೆ. ಅವರಿಗೆ ಧನ್ಯವಾದ. ಕೃಷ್ಣನ ಮೇಲಿನ ಅತ್ತೆಯ ಅಪಾರ ಭಕ್ತಿ ನನ್ನ ಆಧ್ಯಾತ್ಮಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಿತು. ಜತೆಗೆ ಆಧ್ಯಾತ್ಮಿಕ ಮಾರ್ಗದರ್ಶಕರಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ಇಸ್ಕಾನ್ ವೃಂದಾವನದಲ್ಲಿ ಗುರೂಜಿಯೊಂದಿಗೆ ಮಾತನಾಡುವಾಗ, ಅವರು ನನಗೆ ಶ್ರೀಕೃಷ್ಣನಿಗೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಓದಲು ಕೊಟ್ಟರು. ಹೆಚ್ಚಿನ ಪುಸ್ತಕಗಳು ಸಂಸ್ಕೃತದಲ್ಲಿವೆ. ಸಂಸ್ಕೃತ ನನಗೆ ಅರ್ಥವಾಗಲಿಲ್ಲ. ಬಳಿಕ ಗುರೂಜಿ ಓದಿ ಹೇಳಿದರು. ಬೆಳಗ್ಗೆ ಅದನ್ನು ಪಠಿಸಲು ಸೂಚಿಸಿದರು. ದಿನಕಳೆದಂತೆ ನಾನು ಆ ಸಾಲುಗಳನ್ನು ಓದಿ ಅವುಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದೆ. ಈಗ ಆ ತತ್ತ್ವಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.
ಯಾ ರಘಾನಿ ಅವರ ಮೊದಲ ಪುಸ್ತಕ 'ಜೀತ್ 18 ಅಧ್ಯಾಯ ಮತ್ತು ಮೈನ್ ಔರ್ ಮೇರೆ ಕೃಷ್ಣ'. ಇದಲ್ಲದೇ ಅವರ ಮತ್ತೊಂದು ಪುಸ್ತಕ 'ಮೇರೋ ವೃಂದಾವನ' ಕೂಡ ಶೀಘ್ರದಲ್ಲೇ ಪ್ರಕಟವಾಗಲಿದೆ.
ಇದನ್ನೂ ಓದಿ:ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ 100 ನಿಮಿಷಗಳಲ್ಲಿ 1 ರಿಂದ 100 ರವರೆಗೆ ಮಗ್ಗಿ ಪಠಿಸಿ ವಿಶ್ವ ದಾಖಲೆ