ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ ಮೂರು ದಿನಗಳಲ್ಲಿ ಉಕ್ರೇನ್ನಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಇಂದು ಉಕ್ರೇನ್ನ ಖಾರ್ಕಿವ್ ನಗರಿಯ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದ್ದು ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ ಉಕ್ರೇನ್ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಭಾರತದಿಂದ 26 ವಿಮಾನಗಳು ಉಕ್ರೇನ್ಗೆ ತೆರಳಲಿದ್ದು, ಸಾವಿರಾರು ವಿದ್ಯಾರ್ಥಿಗಳು/ ನಾಗರಿಕರನ್ನು ಹೊತ್ತು ತರಲಿವೆ.
ಉಕ್ರೇನ್ ಮೇಲೆ ರಷ್ಯಾ ಕಳೆದ ಆರು ದಿನಗಳಿಂದ ಮಿಲಿಟರಿ ದಾಳಿ ನಡೆಸುತ್ತಿದ್ದು, ಈ ವಿಚಾರವಾಗಿ ಅನೇಕ ಸಲ ಪ್ರಧಾನಿ ಪ್ರಮುಖ ಸಚಿವರು, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ನಿನ್ನೆ ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ, ಕೇಂದ್ರದ ನಾಲ್ವರು ಸಚಿವರನ್ನು ಉಕ್ರೇನ್ ನೆರೆ ದೇಶಗಳಿಗೆ ಕಳುಹಿಸಿ, ಭಾರತೀಯರ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದ್ದರು.