ಮುಂಬೈ :ವಾರ್ಧಾ ಜಿಲ್ಲೆಯಲ್ಲಿ ತನ್ನ 25 ವರ್ಷದ ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೊಳಗಾದ 17 ವರ್ಷದ ಬಾಲಕಿ ತನ್ನ 24 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯನ್ನು ತಕ್ಷಣವೇ ಪರೀಕ್ಷಿಸಿ ನಾಳೆ ಆಕೆಯ ಆರೋಗ್ಯ ವರದಿ ಸಲ್ಲಿಸುವಂತೆ ಹಿಂಗನ್‌ಘಾಟ್ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮುಂಬೈ ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವರದಿ ಕೇಳಲಾಗಿದೆ.
ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ಅಭಯ್ ಮಂತ್ರಿ ಮತ್ತು ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಅವರ ಪೀಠ ಈ ವರದಿಗಳನ್ನು ಪರಿಶೀಲಿಸಿದ ನಂತರ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಆರು ತಿಂಗಳ ಹಿಂದೆ ಸಂತ್ರಸ್ತೆಯನ್ನು ಆಕೆಯ ಪಕ್ಕದ ಮನೆಯವರು ಅತ್ಯಾಚಾರ ಮಾಡಿದ್ದರು. ಇದರಿಂದ ಆಕೆ ಗರ್ಭ ಧರಿಸಿದ್ದಳು. ವಿಚಾರ ತಿಳಿದ ನಂತರ ಆಕೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ಹಿಂಗನ್‌ಘಾಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಗರ್ಭವನ್ನು ತೆಗೆಸುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಆದರೆ, ಹೈಕೋರ್ಟ್ ಅನುಮತಿ ಇಲ್ಲದೇ ಗರ್ಭಪಾತ ಮಾಡುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಂಬಂಧಿಕರು ಬಾಂಬೆ ಹೈಕೋರ್ಟ್‌ಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪೀಠದ ಮುಂದೆ ಅರ್ಜಿದಾರರ ಪರವಾಗಿ ವಾದಿಸಿದ ಪ್ರಾಸಿಕ್ಯೂಟರ್ಗಳು, ಸಂತ್ರಸ್ತೆ ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದಳು ಹೀಗಾಗಿ ಆಕೆಯನ್ನು ಹಿಂಗನ್‌ಘಾಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಬಾಲಕಿಯನ್ನು ಪರೀಕ್ಷಿಸಿದಾಗ ಆಕೆ 24 ವಾರಗಳ ಗರ್ಭಿಣಿ ಆಗಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿದ್ದರು. ಈ ವೇಳೆ, ಪೋಷಕರು ಬಾಲಕಿಗೆ ಗರ್ಭಪಾತ ಮಾಡಿಸುವಂತೆ ವೈದ್ಯರಲ್ಲಿ ಕೇಳಿದ್ದರು. ಆದರೆ ಇದನ್ನು ನಿರಾಕರಿಸಿದ ವೈದ್ಯರು, ನ್ಯಾಯಾಲಯದ ಅನುಮತಿ ಪಡೆದುಕೊಂಡು ಬರುವಂತೆ ತಿಳಿಸಿದ್ದರು. ಈ ಸಲಹೆ ಮೆರೆಗೆ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದೇವೆ. ಇನ್ನು ಸಂತ್ರಸ್ಥೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಸಂತ್ರಸ್ಥೆ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠ, ವೈದ್ಯರ ವರದಿ ಬಂದ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿತು. ಸಂತ್ರಸ್ತೆಯನ್ನು ತಕ್ಷಣ ಪರೀಕ್ಷಿಸಿ ನಾಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹಿಂಗನ್‌ಘಾಟ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಸೇವಕಿ ವರ್ಷಾ ವಿದ್ಯಾ ವಿಲಾಸ್ ಮಾತನಾಡಿ, ಇದು ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣವಾಗಿದೆ. ಸಮಾಜದಲ್ಲಿ ಇಂತಹ ಅಪರಾಧಗಳ ವಿರುದ್ಧ ಜಾಗೃತಿ ಮೂಡಿಸುವುದು ತೀರಾ ಅವಶ್ಯಕವಾಗಿದೆ. ಈ ಘಟನೆಗಳನ್ನು ತಡೆಯಲು ಪೊಲೀಸರು ಹಾಗೂ ಜಾಗೃತ ಸಮಿತಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :Law on Abortion: ಗರ್ಭಪಾತಕ್ಕಾಗಿ 24 ಗಂಟೆ ಕಾಯಬೇಕಿಲ್ಲ...ಕೋರ್ಟ್ ಮಹತ್ವದ ತೀರ್ಪು: ವಕೀಲರಿಗೆ ಮತ್ತೊಂದು ದೊಡ್ಡ ಜಯ