ಮುಂಬೈ:ರಾಜಕೀಯ ಹೊಯ್ದಾಟದ ಮಧ್ಯೆಯೇ ಅಲ್ಲಿನ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ವಿವೇಕ್ ಫನ್ಸಾಲ್ಕರ್ ಅವರನ್ನು ಮುಂಬೈನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಹಾಲಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರು ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಫನ್ಸಾಲ್ಕರ್ 1989 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಅಲ್ಲದೇ, ನಾಳೆ ನಡೆಯುವ ವಿಶ್ವಾಸ ಮತಯಾಚನೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು 2 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬಂಡಾಯ ನಾಯಕ ಏಕನಾಥ್ ಶಿಂದೆ ನೇತೃತ್ವದಲ್ಲಿ ಅಸ್ಸೋಂನ ಗುವಾಹಟಿಯಲ್ಲಿ ಠಿಕಾಣಿ ಹೂಡಿರುವ ಶಾಸಕರು ನಾಳೆ ಮುಂಬೈಗೆ ಬರಲಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವಹಿಸಲಾಗಿದೆ.
ದೆಹಲಿ, ಪುಣೆ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮುಂಬೈಗೆ ಸಿಆರ್‌ಪಿಎಫ್ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂರು ವಿಶೇಷ ವಿಮಾನಗಳಲ್ಲಿ 2 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿ ಮುಂಬೈಗೆ ಆಗಮಿಸಿದ್ದಾರೆ. ಬಂಡಾಯ ಶಾಸಕರಿಗೆ ಶಿವಸೇನೆ ಬೆದರಿಕೆಯೊಡ್ಡಿದ ಕಾರಣ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.