ಗುವಾಹಟಿ(ಅಸ್ಸೋಂ): ನಿನ್ನೆ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿದ್ದರಿಂದ ತೀವ್ರ ನಿರಾಸೆಯಿಂದ ಖಿನ್ನತೆಗೆ ಒಳಗಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುವಾಹಟಿಯ ಸಾವ್ಕುಚಿಯಲ್ಲಿ ನಡೆದಿದೆ. ಮೃಣಾಲ್ ಮಜುಂದಾರ್(20) ಮೃತ ಯುವಕ.
ಮೃತ ಮೃಣಾಲ್ ಕುಟುಂಬಸ್ಥರ ಪ್ರಕಾರ, ಮೃಣಾಲ್ ನಿನ್ನೆ ಭಾರತದ ಸೋಲಿನಿಂದ ನಿರಾಸೆಗೊಂಡು ಊಟ ಸೇವಿಸದೇ ರಾತ್ರಿ 11 ಗಂಟೆಗೆ ಮಲಗಿದ್ದರು. ಮೃಣಾಲ್ ಬೆಳಗ್ಗೆ ಎಷ್ಟೊತ್ತಾದರೂ ಏಳದಿದ್ದಾಗ. ಅನುಮಾನಗೊಂಡ ಕುಟುಂಬಸ್ಥರು, ಮೃಣಾಲ್ ಮಲಗಿದ್ದ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಮೃಣಾಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ಕಂಡು ತಕ್ಷಣ ಅವರನ್ನು ಜಿಎಂಸಿಎಚ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೃಣಾಲ್ನನ್ನು ಪರೀಕ್ಷಿಸಿದ ವೈದ್ಯರು, ಮೃಣಾಲ್ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೃತ ಮೃಣಾಲ್ ಮಜುಂದಾರ್ ಐಟಿಐ ವಿದ್ಯಾರ್ಥಿಯಾಗಿದ್ದಾರೆ. ಮೃಣಾಲ್ ಭಾರತ ಸೋತಿದ್ದರಿಂದ ನಿರಾಸೆಗೊಂಡು ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಗಂಭೀರ ಅನಾರೋಗ್ಯ ಸಮಸ್ಯೆಯನ್ನು ಹೊಂದಿರದ ಮೃಣಾಲ್ ಅವರ ಸಾವಿನಿಂದ ಕುಟುಂಬಸ್ಥರು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಕ್ರಿಕೆಟ್ ಪ್ರೇಮಿಗಳ ಕನಸು ಭಗ್ನ:ಈ ಬಾರಿ ದೇಶದ ಕ್ರಿಕೆಟ್ ಅಭಿಮಾನಿಗಳು 10 ವರ್ಷದ ಐಸಿಸಿ ಟ್ರೋಫಿಯ ಬರ ಈ ಬಾರಿ ನೀಗುತ್ತದೆ ಎಂದು ಭಾವಿಸಿದ್ದರು. ಗೆಲುವಿನ ಕ್ಷಣವನ್ನು ಸಂಭ್ರಮಿಸಲು ಸಕಲ ಮಾನಸಿಕ ತಯಾರಿ ಮಾಡಿಕೊಂಡಿದ್ದರು. ಆದರೆ, ಕ್ರಿಕೆಟ್ ಪ್ರೇಮಿಗಳ ಆ ಕನಸು ಭಗ್ನವಾಗಿದೆ. ಟ್ರೋಫಿ ಗೆಲುವಿನ ಸಂಭ್ರಮವನ್ನು ಮುಂದಿನ ಟೂರ್ನಿಗೆ ಮುಂದೂಡಬೇಕಾಗಿದೆ. ತವರಿನಲ್ಲೇ ನಡೆದ ವಿಶ್ವಕಪ್ನಲ್ಲಿ ತಂಡದ ಸೋಲು ಕಂಡಿದ್ದು ಕೋಟ್ಯಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
2023ರ ವಿಶ್ವಕಪ್ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರಿಂದ ಹಿಡಿದು ಅನೇಕರ ಅಭಿಪ್ರಾಯ ಆಗಿತ್ತು. ಇದಕ್ಕೆ ಕಾರಣ ತಂಡ ಸತತ 10 ಪಂದ್ಯಗಳನ್ನು ಟೂರ್ನಿಯಲ್ಲಿ ಗೆದ್ದಿರುವುದು. ಅಜೇಯವಾಗಿ ಫೈನಲ್ ತಲುಪಿದ್ದ ತಂಡ ವಿಶ್ವಕಪ್ ಉದ್ದಕ್ಕೂ ಸ್ಥಿರ ಪ್ರದರ್ಶನ ನೀಡಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರಿಂದ 6 ವಿಕೆಟ್ಗಳ ಸೋಲನುಭವಿಸಬೇಕಾಯಿತು.
ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್, "ಪ್ರೀತಿಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ದೃಢ ನಿರ್ಧಾರವು ಗಮನಾರ್ಹವಾಗಿದೆ. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಮರೆಯಲಾಗದು ಕನ್ನಡಿಗ ರಾಹುಲ್ ಆಟ: ಸೋತರೂ ದಾಖಲೆ ಗೌಣವಲ್ಲ