ಬಾರಾಬಂಕಿ(ಉತ್ತರಪ್ರದೇಶ): ಇಲ್ಲಿನ ರಾಮ್‌ಸ್ನೇಹಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಖನೌ - ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 18 ಜನರು ದಾರುಣವಾಗಿ ಮೃತಪಟ್ಟಿದ್ದಾರೆ.
ಕೆಟ್ಟು ನಿಂತಿದ್ದ ಡಬಲ್ ಡೆಕ್ಕರ್ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ 18 ಜನರು ಸಾವನ್ನಪ್ಪಿದ್ದರೆ, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಲಖನೌದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಜುಲೈ 27ರ ಮಧ್ಯಾಹ್ನ 1.30ರ ಸುಮಾರಿಗೆ ಅವಘಡ ಸಂಭವಿಸಿದ್ದು, ಬಸ್ ಹರಿಯಾಣದಿಂದ ಬಿಹಾರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಪರಿಹಾರ ಘೋಷಿಸಿದ ಪಿಎಂ:ದುರಂತದ ಬಗ್ಗೆ ತೀವ್ರ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ಪಿಎಂಎನ್ಆರ್ಎಫ್ನಿಂದ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಧನ ಘೋಷಿಸಿದ್ದಾರೆ.
ಘಟನೆ ವಿವರ: ಅಯೋಧ್ಯೆಯ ಗಡಿಯಲ್ಲಿರುವ ಕಲ್ಯಾಣಿ ನದಿ ಸೇತುವೆಯ ಮೂಲಕ ಹಾದು ಹೋಗುವಾಗ ರಾತ್ರಿ 1 ಗಂಟೆ ಸುಮಾರಿಗೆ ಬಸ್ ಕೆಟ್ಟುನಿಂತಿದೆ. ಈ ಸಂದರ್ಭದಲ್ಲಿ ಚಾಲಕ ಮತ್ತು ಆಪರೇಟರ್ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದರು. ಕೆಲವು ಪ್ರಯಾಣಿಕರು ಬಸ್ನ ಹೊರಗೆ ನಿಂತಿದ್ದರೆ, ಇನ್ನೂ ಕೆಲವರು ಒಳಗೆ ಕುಳಿತಿದ್ದರು. ಆದರೆ ಈ ಸಂದರ್ಭದಲ್ಲಿ ವೇಗವಾಗಿ ಹಿಂದಿನಿಂದ ಬಂದ ಟ್ರಕ್ ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ 18 ಜನರು ಸಾವನ್ನಪ್ಪಿದ್ದು 15 ಮಂದಿಗೆ ಗಾಯಗಳಾಗಿವೆ.