ಐಜ್ವಾಲ್ (ಮಿಜೋರಾಂ) :ಮಿಜೋರಾಂನ ಸೈರಾಂಗ್ ಪ್ರದೇಶದ ಬಳಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು ಕನಿಷ್ಠ 17 ಕಾರ್ಮಿಕರು ಬುಧವಾರ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ರಾಜಧಾನಿ ಐಜ್ವಾಲ್‌ನಿಂದ ಸುಮಾರು 21 ಕಿಮೀ ದೂರದಲ್ಲಿರುವ ಸೈರಾಂಗ್ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಘಟನೆಯ ವೇಳೆ 35-40 ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರತರಾಗಿದ್ದರು. ಏಕಾಏಕಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ. ಅದರಡಿ ಕಾರ್ಮಿಕರು ಸಿಲುಕಿದ್ದು, ಸದ್ಯಕ್ಎ 17 ಮಂದಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಸಿಕ್ಕಿದೆ. ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಎನ್‌ಎಫ್ ರೈಲ್ವೇಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕುರುಂಗ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿದ್ದ ಸೇತುವೆಯು ಬೈರಾಬಿಯಿಂದ ಸೈರಾಂಗ್ಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯದಂತೆ ಇಂದು ಕೆಲಸ ನಡೆಯುತ್ತಿದ್ದಾಗ ಸೇತುವೆ ಅತಿಯಾದ ಭಾರದಿಂದ ಕುಸಿದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಎಂ ತೀವ್ರ ಸಂತಾಪ:ದುರಂತದ ಬಗ್ಗೆ ಮಾಹಿತಿ ಪಡೆದ ಮಿಜೋರಾಂ ಮುಖ್ಯಮಂತ್ರಿ ಝೋರಮ್ತಂಗಾ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಐಜ್ವಾಲ್ ಬಳಿಯ ಸೈರಾಂಗ್ನಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದಿದ್ದು, 17 ಕಾರ್ಮಿಕರು ಸಾವನ್ನಪ್ಪಿದ್ದು, ತೀವ್ರ ದುಃಖ ತಂದಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ದುರಂತದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ಕಾರ್ಮಿಕರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಬಂದ ಸ್ಥಳೀಯರಿಗೂ ಕೃತಜ್ಞತೆಗಳು ಎಂದು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದಾರೆ.
ಪರಿಹಾರ ಘೋಷಿಸಿದ ಪ್ರಧಾನಿ:ಈ ನಡುವೆ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಘಟನೆಯ ದುರದೃಷ್ಟಕರ. ಮಡಿದವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಚೇತರಿಸಿಕೊಳ್ಳಲಿ ಎಂದು ಅವರು ಎಕ್ಸ್ನಲ್ಲಿ ಕೋರಿದ್ದಾರೆ.
(ಪಿಟಿಐ- ಎಎನ್ಐ ಮತ್ತು ಐಎಎನ್ಎಸ್)
ಇದನ್ನೂ ಓದಿ:ಬ್ಯಾಗ್ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್ನಿಂದ 234 ವನ್ಯಜೀವಿಗಳ ರಕ್ಷಣೆ