ರಂಗಾರೆಡ್ಡಿ (ತೆಲಂಗಾಣ): ಕಾಲೇಜು ಆಡಳಿತ ಮಂಡಳಿಯ ಒತ್ತಡ ತಾಳಲಾರದೇ ಇಂಟರ್ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಗಂಡಿಪೇಟ ತಾಲೂಕಿನ ನರಸಿಂಗಿಯಲ್ಲಿ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಸಾತ್ವಿಕ್ (16) ಎಂದು ಗುರುತಿಸಲಾಗಿದೆ.
ವಿವರ: ನರಸಿಂಗಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಕೇಶಂಪೇಟ್ ತಾಲೂಕಿನ ಕೊತಪೇಟ್ ಗ್ರಾಮದ ಸಾತ್ವಿಕ್ ಎಂಬಾತ ಇಂಟರ್ ಮೊದಲ ವರ್ಷದಲ್ಲಿ ಓದುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಉತ್ತಮ ಅಂಕಗಳನ್ನು ಪಡೆಯುತ್ತಿಲ್ಲ ಎಂದು ಆಡಳಿತ ಮಂಡಳಿಯವರು ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮಂಗಳವಾರ ರಾತ್ರಿ ತರಗತಿಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಸಹ ವಿದ್ಯಾರ್ಥಿಯರು ಸಂಬಂಧಪಟ್ಟವರಿಗೆ ತಿಳಿಸಿದರೂ ಅವರು ತಕ್ಷಣ ಸ್ಪಂದಿಸಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ಕಾಲೇಜಿನಲ್ಲಿ ಒಂದೇ ಒಂದು ವಾಹನವೂ ಸಿಗದೇ ರಸ್ತೆಗೆ ಹೋಗಿ ಲಿಫ್ಟ್ ಕೇಳಿ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾತ್ವಿಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ವಿದ್ಯಾರ್ಥಿಗಳು ಹೇಳಿದರು. ಬಳಿಕ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯಿಂದಾಗಿಯೇ ಸಾತ್ವಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲರು ಮತ್ತು ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಇತರೆ ವಿದ್ಯಾರ್ಥಿಗಳ ಮುಂದೆ ನಿಂದಿಸಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಕಾಲೇಜಿನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಪೊಲೀಸರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದರು. ವಿದ್ಯಾರ್ಥಿಯ ಕುಟುಂಬಸ್ಥರನ್ನು ಸಮಾಧಾನಪಡಿಸಿ ನ್ಯಾಯದ ಭರವಸೆ ನೀಡಿದರು. ಬಳಿಕ ಸಂತ್ರಸ್ತರ ಕುಟುಂಬ ಪ್ರತಿಭಟನೆ ಕೈಬಿಟ್ಟು ಅಲ್ಲಿಂದ ತೆರಳಿದರು.
"ಸಾತ್ವಿಕ್ ಪೋಷಕರ ದೂರಿನ ಮೇರೆಗೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಂಶುಪಾಲರು ಮತ್ತು ಇತರ ಉಪನ್ಯಾಸಕರು ನಿಂದಿಸಿದ್ದು, ಅದನ್ನು ಸಹಿಸಲಾಗದೇ ಸಾವನ್ನಪ್ಪಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಸಂಬಂಧಪಟ್ಟ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ" ಎಂದು ನರಸಿಂಗಿ ಇನ್ಸ್‌ಪೆಕ್ಟರ್ ಶಿವಕುಮಾರ್ ತಿಳಿಸಿದ್ದಾರೆ.
ತನಿಖೆಗೆ ಆದೇಶಿಸಿದ ಸಚಿವೆ ಸಬಿತಾ ಇಂದ್ರಾ ರೆಡ್ಡಿ:ಘಟನೆ ಕುರಿತು ಶಿಕ್ಷಣ ಸಚಿವೆ ಸಬಿತಾ ಇಂದ್ರಾ ಪ್ರತಿಕ್ರಿಯಿಸಿ, ವಿದ್ಯಾರ್ಥಿಯ ಸಾವಿನ ಕುರಿತು ತನಿಖೆಗೆ ಆದೇಶಿಸಲಾಗಿದೆ. ಸಂಪೂರ್ಣ ವರದಿ ನೀಡುವಂತೆ ಅಂತರ ಮಂಡಳಿ ಕಾರ್ಯದರ್ಶಿ ನವೀನ್ ಮಿತ್ತಲ್ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
"ನನ್ನ ಕಿರಿ ಮಗ ತುಂಬಾ ಸೂಕ್ಷ್ಮ ಮನೋಭಾವದವನಾಗಿದ್ದ. ಉತ್ತಮ ಅಂಕಗಳನ್ನು ಪಡೆಯುತ್ತಿದ್ದ. ಆತನ ಮೇಲೆ ಪ್ರಾಂಶುಪಾಲರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಅವರು ನನ್ನ ಮಗನಿಗೆ ಥಳಿಸಿದ್ದಾರೆ. ಬೆದರಿಕೆಯಿಂದ ಆತ ಸಾವನ್ನಪ್ಪಿದ್ದಾನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. - ವಿದ್ಯಾರ್ಥಿಯ ಪೋಷಕರು.