ಆಂಧ್ರಪ್ರದೇಶ: ಇಲ್ಲಿನ ಅನಂತಪುರಂ ಜಿಲ್ಲೆಯಲ್ಲಿನ ಆಸ್ಪತ್ರೆಯೊಂದರಲ್ಲಿ ಸುಮಾರು 14 ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದು, ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಸೋಂಕಿತರ ಸಂಬಂಧಿಕರು ಆರೋಪಿಸಿದ್ದಾರೆ. ಈ ನಡುವೆಯೇ ಕೋವಿಡ್ ವಾರ್ಡ್‌ಗಳಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ಅಡ್ಡಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ 14 ಕೊರೊನಾ ಸೋಂಕಿತರ ಸಾವು: ಆಮ್ಲಜನಕದ ಕೊರತೆಯೇ ಕಾರಣ ಎಂದ ಸಂಬಂಧಿಕರು
ಆಸ್ಪತ್ರೆಯೊಂದರಲ್ಲಿ ಸುಮಾರು 14 ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದು, ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಸೋಂಕಿತರ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನು ಅಧಿಕಾರಿ ನಿಶಾಂತ್ ಕುಮಾರ್ ಅವರು ಸರ್ಕಾರಿ ಜನರಲ್ ಆಸ್ಪತ್ರೆಯ ಕೋವಿಡ್ ರೋಗಿಗಳ ಸಾವಿನ ಬಗ್ಗೆ ಸ್ಪಷ್ಟನೆ ನೀಡಿ, ಹಿಂದಿನ ದಿನದಿಂದ 21 ಜನರು ಕೋವಿಡ್ ವಾರ್ಡ್‌ಗಳಲ್ಲಿ ಮೃತಪಟ್ಟಿದ್ದಾರೆ. ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂಬುದರಲ್ಲಿ ಸತ್ಯವಿಲ್ಲ. ಕೋವಿಡ್ ರೋಗಿಗಳು ವಿವಿಧ ಕಾರಣಗಳಿಂದ ಸಾವಿಗೀಡಾಗಿದ್ದಾರೆ ಎಂದಿದ್ದಾರೆ.
ಶಾಸಕ ಅನಂತ ವೆಂಕಟರಮಿರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಘಟನೆ ದುರದೃಷ್ಟಕರ. ಇದರ ಬಗ್ಗೆ ನಾನು ಜೆಸಿ ನಿಶಾಂತ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ವಿವರಗಳನ್ನು ಕೇಳಿದ್ದೇನೆ. ಅಧಿಕಾರಿಗಳು ಆಮ್ಲಜನಕದ ಸಮಸ್ಯೆ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಸಾವಿಗೀಡಾದ ವ್ಯಕ್ತಿಗಳ ಸಂಬಂಧಿಗಳು ಬೇರೆ ರೀತಿ ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಾನು ಆಮ್ಲಜನಕದ ಕೊರತೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳನ್ನು ಎಚ್ಚರಿಸಿದ್ದೆ. ಈ ಘಟನೆ ಕುರಿತು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.