ರೇವಾರಿ(ಹರಿಯಾಣ): ರೇವಾರಿ ಜೈಲಿನಲ್ಲಿ ಇರಿಸಲಾಗಿದ್ದ 13 ಕೈದಿಗಳು ತಪ್ಪಿಸಿಕೊಂಡಿದ್ದು, ಅವರ ಪತ್ತೆಗೋಸ್ಕರ ನಾಲ್ಕು ಪೊಲೀಸ್ ತಂಡ ರಚನೆ ಮಾಡಲಾಗಿದೆ. ಜೈಲಿನಲ್ಲಿನ ಕಬ್ಬಿಣದ ಗ್ರಿಲ್ ಕತ್ತರಿಸಿ ಅದರಿಂದ ತಪ್ಪಿಸಿಕೊಂಡಿದ್ದು, ತಮ್ಮ ಹಾಸಿಗೆಯಿಂದಲೇ ಹಗ್ಗ ನಿರ್ಮಾಣ ಮಾಡಿ ಪರಾರಿಯಾಗಿದ್ದಾರೆ.
ಜೈಲಿನಿಂದ ತಪ್ಪಿಸಿಕೊಂಡ ಕೋವಿಡ್ ಶಂಕಿತ 13 ಕೈದಿಗಳು
ಕೋವಿಡ್ ಲಕ್ಷಣ ಹೊಂದಿದ್ದ 13 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಇವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ರೇವಾರಿ ಜೈಲಿನ ವಿಶೇಷ ವಿಭಾಗದಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿಂದ ಪರಾರಿಯಾಗಿದ್ದು, ಇದೀಗ ಹುಡುಕಾಟದಲ್ಲಿ ಪೊಲೀಸ್ ತಂಡಗಳು ಮಗ್ನವಾಗಿವೆ. ರೇವಾರಿ ವಿಶೇಷ ಜೈಲ ನಿರ್ಮಾಣ ಹಂತದಲ್ಲಿದ್ದು, 493 ಕೋವಿಡ್ ಸೋಂಕಿತ ಕೈದಿಗಳನ್ನ ಇಲ್ಲಿ ಇಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಜೋರ್ವಾಲ್ ತಿಳಿಸಿದ್ದಾರೆ.
ತಪ್ಪಿಸಿಕೊಂಡಿರುವ ಕೈದಿಗಳ ಮೇಲೆ ಕೊಲೆ, ಕಳ್ಳತನ, ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳಿದ್ದು, ನರ್ನಾಲ್ ಜೈಲಿನಿಂದ ರೇವಾರಿಗೆ ಕರೆತರಲಾಗಿತ್ತು. ಬೆಳಗ್ಗೆ ಕೈದಿಗಳನ್ನ ಎಣಿಸುತ್ತಿದ್ದಾಗ ಅವರು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದ್ದು, ಇದರಲ್ಲಿ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.