ತೇಜ್‌ಪುರ(ಅಸ್ಸಾಂ):ಮಣಿಪುರದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಸಮುದಾಯ ಸಂಘರ್ಷವನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಕೋರಿ 11 ವರ್ಷದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ಕಿರಿಯ ಪರಿಸರ ಹೋರಾಟಗಾರ್ತಿ, ಮಣಿಪುರದಲ್ಲಿ ತಾಂಡವವಾಡುತ್ತಿರುವ ಅಶಾಂತಿಯ ವಿರುದ್ಧ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದ್ದು, ಅತ್ತ ಶೀಘ್ರವೇ ಗಮನ ಹರಿಸಿ ಪರಿಹಾರ ಸೂಚಿಸಬೇಕಿದೆ. ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದಕ್ಕೆ ಹತಾಶೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಕೋರಿದ್ದೇನು?:ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಾಡಲಾದ ವಿಡಿಯೋ ಸಂದೇಶದಲ್ಲಿ ಲಿಸಿಪ್ರಿಯಾ ಅವರು, 'ಪ್ರಿಯ ನರೇಂದ್ರ ಮೋದಿ ಅವರೇ, ಇದು ನಿಮಗೆ ನನ್ನ ತುರ್ತು ಸಂದೇಶ. ಮಣಿಪುರವು ನಾವು ಅಂದುಕೊಂಡ ಹಾಗಿಲ್ಲ. ನಿಮ್ಮ ಮೌನವು ಅಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಪರಿಹಾರವಲ್ಲ. ಶಾಂತಿ ಸ್ಥಾಪನೆಗಾಗಿ ಇನ್ನಷ್ಟು ಜೀವಗಳನ್ನು ಬಲಿ ನೀಡಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಮಕ್ಕಳ ಜೀವಗಳೂ ಅಲ್ಲಿ ಬಲಿಯಾಗುತ್ತಿವೆ. ಮಣಿಪುರಕ್ಕೆ ತಕ್ಷಣವೇ ನ್ಯಾಯ ಬೇಕಿದೆ' ಎಂದು ಕೋರಿದ್ದಾರೆ.
ಮಣಿಪುರದ ಪರಿಸ್ಥಿತಿಯು ಭೀಕರವಾಗಿದೆ. ಸಾವಿರಾರು ಶಾಲೆಗಳು ಅವಶೇಷಗಳಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಆಶ್ರಯತಾಣಗಳಲ್ಲಿ ಜೀವ ಉಳಿಸಿಕೊಳ್ಳುವಂತಾಗಿದೆ. ನೀವು ಈ ವಿಷಯದಲ್ಲಿ ಮೌನವನ್ನು ತ್ಯಜಿಸಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಿ ಎಂದು ಅವರು ಲಿಸಿಪ್ರಿಯಾ ಮನವಿ ಮಾಡಿದ್ದಾರೆ.