ಶಿವಸಾಗರ (ಅಸ್ಸೋಂ): ದಂಪತಿಗಳಿಬ್ಬರು ಮಹಿಳೆಯ ಬಳಿಯಿದ್ದ 10 ತಿಂಗಳ ಗಂಡು ಮಗುವೊಂದು ಕಿತ್ತುಕೊಂಡು, ಆ ಮಗುವಿನ ತಾಯಿಯನ್ನು ಕೊಂದು ಹಾಕಿರುವ ಘಟನೆ ಅಸ್ಸೋಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ದಂಪತಿಯಾದ ಬಸಂತ ಗೊಗೊಯ್ ಮತ್ತು ಹಿಯಾಮಾಯಿ ಗೊಗೊಯ್ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಕೆಂದುಗುರಿಯ ಬೈಲುಂಗ್ ಗಾಂವ್ ನಿವಾಸಿ ನಿತುಮೋನಿ ಲುಖುರಾಶನ್ ಕೊಲೆಯಾದ ಮಹಿಳೆಯಾಗಿದ್ದು, ಕಳೆದ ಸೋಮವಾರದಿಂದ ತನ್ನ 10 ತಿಂಗಳ ಗಂಡು ಮಗುವಿನೊಂದಿಗೆ ಈಕೆ ಕಾಣೆಯಾಗಿದ್ದರು. ಈ ನಡುವೆ ಇದೇ ಮಂಗಳವಾರ ನಿಟುಮೋನಿಯ ಮೃತ ದೇಹವು ಚರೈಡಿಯೊ ಜಿಲ್ಲೆಯ ಟೀ ಎಸ್ಟೇಟ್‌ವೊಂದರ ಚರಂಡಿಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಆಕೆಯ ದೇಹದಲ್ಲಿ ಅನೇಕ ಗಾಯದ ಗುರುತುಗಳಾಗಿದ್ದರಿಂದ ಶಿವಸಾಗರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದರು.
ವಿವಾಹಿತ ಮಗಳಿಗೆ ಮಕ್ಕಳಿಲ್ಲ: ಆರೋಪಿ ಗೊಗೊಯ್ ದಂಪತಿಗೆ ಹಿಮಾಚಲ ಪ್ರದೇಶದಲ್ಲಿ ವಿವಾಹಿತ ಮಗಳು ಇದ್ದು, ಆಕೆಗೆ ದೀರ್ಘ ಕಾಲದಿಂದಲೂ ಮಕ್ಕಳು ಆಗಿಲ್ಲ. ಆದ್ದರಿಂದ ಪುತ್ರಿಯ ಮಗುವಿನ ಕನಸು ಈಡೇರಿಸಲು ಈ ದಂಪತಿ ಈ ಘೋರ ಅಪರಾಧ ಎಸಗಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.