ಕರ್ನಾಟಕ

karnataka

ETV Bharat / assembly-elections

ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಬಲ ಪ್ರದರ್ಶನ: ಸ್ಪರ್ಧೆಯ ಭಾಗವಾದ ಜೆಡಿಎಸ್​ ಅಭ್ಯರ್ಥಿ - Muddebihal Assembly Constituency

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಗಮನ ಸೆಳೆಯುತ್ತಿದೆ. ಹೆಚ್ಚು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ ಕಾರಣ ಇದು ಕಾಂಗ್ರೆಸ್ ಭದ್ರಕೋಟೆ ಆಗಿತ್ತು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಹಜವಾಗಿ ಈ ಬಾರಿ ಚುನಾವಣೆಯ ಕಾವು ಏರುತ್ತಿದ್ದು ಜೆಡಿಎಸ್​ ಕೂಡ ಸ್ಪರ್ಧೆಯ ಭಾಗವಾಗಿ ಹೊರಹೊಮ್ಮುತ್ತಿದೆ.

Muddebihal Constituency Profile
Muddebihal Constituency Profile

By

Published : Apr 5, 2023, 7:24 PM IST

Updated : Apr 5, 2023, 9:02 PM IST

ವಿಜಯಪುರ:ತೀವ್ರ ಕುತೂಹಲ ಕೆರಳಿಸಿರುವ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರಕ್ಕೆ ಅಪ್ಪಾಜಿ ನಾಡಗೌಡ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಈಗಾಗಲೇ ಹೆಸರು ಘೋಷಣೆ ಮಾಡಿದೆ. ಬಿಜೆಪಿ ಸಂಭಾವ್ಯ ಪಟ್ಟಿಯಲ್ಲಿ ಹಾಲಿ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೆಸರಿದ್ದರೆ, ಜೆಡಿಎಸ್​​ನಿಂದ ಚನ್ನಬಸಪ್ಪ ಸೋಲಾಪುರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಚುನಾವಣೆ ಘೋಷಣೆಯಿಂದ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಕೂಡ ಜೋರಾಗಿದೆ.

ಎ.ಎಸ್.ಪಾಟೀಲ್ ನಡಹಳ್ಳಿ

ಕ್ಷೇತ್ರದ ವೈಶಿಷ್ಟ್ಯ:ಮುದ್ದೇಬಿಹಾಳ ಕ್ಷೇತ್ರದ ಇತಿಹಾಸ ನೋಡಿದರೆ ಬಲು ರೋಚಕ ಅನ್ನಿಸುತ್ತದೆ. ದೇಶಮುಖ್​ ಹಾಗೂ ನಾಡಗೌಡ ಕುಟುಂಬಗಳೇ ಹೆಚ್ಚು ಕಾಲ ಪಾರುಪತ್ಯ ಮೆರೆದಿದ್ದು, ಕ್ಷೇತ್ರದ ವೈಶಿಷ್ಟ್ಯ. ಕಳೆದ ಬಾರಿಯಷ್ಟೇ ಬಿಜೆಪಿ ಮೊದಲ ಬಾರಿ ಗೆದ್ದು ಬೀಗಿತ್ತು.‌ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಪ್ಪಾಜಿ ನಾಡಗೌಡ ತಮ್ಮ ಕೊನೆ ಚುನಾವಣೆ ಎಂದು ಘೋಷಿಸಿಕೊಂಡು ಕಣಕ್ಕೆ ಇಳಿದಿದ್ದಾರೆ. ಎ.ಎಸ್. ಪಾಟೀಲ ನಡಹಳ್ಳಿ ಕೂಡ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿ ಕಣದಲ್ಲಿ ಇದ್ದಾರೆ. ಜೆಡಿಎಸ್ ಅಭ್ಯರ್ಥಿ ಚನ್ನಬಸಪ್ಪ ಸೋಲಾಪುರ ಹೆಚ್ಚು ಮತದಾರರಿಗೆ ಪರಿಚಯವಿಲ್ಲದಿದ್ದರೂ ರಾಜಕೀಯ ಅನುಭವ ಹೊಂದಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಅಪ್ಪಾಜಿ ನಾಡಗೌಡ

ಕ್ಷೇತ್ರಕ್ಕೆ ತನ್ನದೇಯಾದ ಐತಿಹಾಸಿಕ ಕೂಡ ಇದೆ. 1565ರಲ್ಲಿ ತಾಳಿಕೋಟಿ ರಕ್ಕಸತಂಗಡಿ ಯುದ್ಧ ನಡೆದಿದ್ದು ಇದೇ ಮತ ಕ್ಷೇತ್ರದಲ್ಲಿ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಇದೇ ರಕ್ಕಸತಂಗಡಿ ಯುದ್ಧ ಕಾರಣವಾಯಿತು ಅನ್ನೋದು ಇತಿಹಾಸದಲ್ಲಿ ಉಲ್ಲೇಖ ಕೂಡ ಇದೆ. ಈ ಕ್ಷೇತ್ರದಲ್ಲಿ ಈಶ್ವರ ದೇವಾಲಯ, ಜೈನ ಬಸದಿ, ಮಲ್ಲಿಕಾರ್ಜುನ ದೇವಾಲಯ, ಮೂರು ಲಿಂಗ ದೇವಾಲಾಯ, ಪಾಂಚ್ ಪೀರ್ ಮಸೀದಿ ಸೇರಿದಂತೆ ಹತ್ತು ಹಲವು ಪ್ರಸಿದ್ಧ ದೇವಾಲಯಗಳಿವೆ. ಇವೆಗಳೆಲ್ಲವೂ ತಮ್ಮದೇಯಾದ ಇತಿಹಾಸವನ್ನು ಹೊಂದಿವೆ.

ಸ್ಥಾನವಾರು ವಿಧಾನಸಭೆ ಚುನಾವಣೆ

ಇವುಗಳಲ್ಲದೇ ನಾಲತವಾಡದಲ್ಲಿರುವ ಮಹಾದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ, ತಾಳಿಕೋಟೆಯಲ್ಲಿ ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠ, ಕುಂಟೋಜಿಯಲ್ಲಿ ನಂದಿ‌ಬಸವಣ್ಣನ ದೇವಾಲಯ ಸೇರಿದಂತೆ ಹಲವು ಸ್ಥಳಗಳು ಇದೇ ಮತಕ್ಷೇತ್ರದ ಧಾರ್ಮಿಕ ಕೇಂದ್ರಗಳಾಗಿವೆ‌.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ವಿವರ

ಟಿಕೆಟ್​ಗಾಗಿ ಪೈಪೋಟಿ: ಇಂತಹ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ‌ ಈಗ ಚುನಾವಣಾ ರಂಗು ಪಡೆದುಕೊಂಡಿದೆ. ಕಾಂಗ್ರೆಸ್​ನಲ್ಲಿ ಅಪ್ಪಾಜಿ ನಾಡಗೌಡ ಬಿಟ್ಟರೆ ಪಕ್ಷದಲ್ಲಿ ಅವರ ಪ್ರತಿಸ್ಪರ್ಧಿ ಇಲ್ಲ. ಆದರೆ, ಬಿಜೆಪಿಯಲ್ಲಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ್ ಕುಚಬಾಳ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಸದ್ಯ ಸಂಭಾವ್ಯರ ಪಟ್ಟಿಯಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಇದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಪಕ್ಷ ಚನ್ನಬಸಪ್ಪ ಸೋಲಾಪುರ ಅವರಿಗೆ ಟಿಕೆಟ್​ ಘೋಷಣೆ ಮಾಡಿದ್ದು, ಅವರು ಎರಡು ರಾಷ್ಟ್ರೀಯ ಪಕ್ಷಗಳಿಗೆ ಯಾವ ರೀತಿ ಸ್ಪರ್ಧೆ ಒಡ್ಡಬಹುದು ಎನ್ನುವುದು ಕುತೂಹಲ ಕೆರಳಿಸಿದೆ. ಹಾಗಾಗಿ ಸಹಜವಾಗಿ ಕ್ಷೇತ್ರ ರಾಜಕೀಯ ರಂಗು ಪಡೆದಿದೆ.

ಗೆದ್ದ ಅಭ್ಯರ್ಥಿಗಳ ಆಸ್ತಿ ಘೋಷಣೆ ಹಾಗೂ ಕ್ರಿಮಿನಲ್​ ದಾಖಲೆಗಳು

ಮತದಾರರ ಮಾಹಿತಿ:ಕ್ಷೇತ್ರದಲ್ಲಿ ಒಟ್ಟು 2,10,348 ಮತದಾರರಿದ್ದಾರೆ. ಅದರಲ್ಲಿ 1,06,875 ಪುರುಷರು, 1,03,451 ಮಹಿಳೆಯರು, 22 ಇತರೆ ಮತದಾರರಿದ್ದಾರೆ. ಎಸ್​ಸಿ-ಎಸ್​ಟಿ ಸಮುದಾಯದವರು ಕ್ಷೇತ್ರದಲ್ಲಿ ನಿರ್ಣಾಯಕ. ಇವರೊಂದಿಗೆ ಅಲ್ಪಸಂಖ್ಯಾತರು, ಪಂಚಮಸಾಲಿ, ಹಾಲುಮತ, ಹಂಡೇವಜಿರ, ರೆಡ್ಡಿ, ಬಣಜಿಗ ಸಮುದಾಯಗಳು ಕೂಡ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ.

ಅಭ್ಯರ್ಥಿಗಳ ಗೆಲವಿನ ಅಂತರ

ಕಳೆದ‌ ಬಾರಿಯ ಚುನಾವಣಾ ಫಲಿತಾಂಶ:2008ರ ಚುನಾವಣೆಯಲ್ಲಿ ಅಪ್ಪಾಜಿ ಚನ್ನಬಸವರಾಜ​ ಶಂಕರರಾವ್​ ನಾಡಗೌಡ ಅವರು ಕ್ಷೇತ್ರದ ಶಾಸಕರಾಗಿದ್ದರು. ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು 30,203 ಮತಗಳಿಂದ ಗೆದ್ದಿದ್ದರು. ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಬಿರಾದಾರ್ ಮಂಗಳ ಶಾಂತಗೌಡ್ರು 21,662 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ 2,403 ಮತಗಳ ಅಂತರದಿಂದ ನಾಡಗೌಡ ಗೆಲುವು ಕಂಡಿದ್ದರು. 14,739 ಮತಗಳನ್ನು ಪಡೆದ ಜೆಡಿಎಸ್​ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಮತದಾರರ ಬೆಳವಣಿಗೆ

2013ರ ಚುನಾವಣೆಯಲ್ಲಿಯೂ ಅಪ್ಪಾಜಿ ಚನ್ನಬಸವರಾಜ​ ಶಂಕರರಾವ್​ ನಾಡಗೌಡರೇ ಆಯ್ಕೆ ಆಗಿದ್ದರು. 34,747 ಮತಗಳನ್ನು ಪಡೆಯುವ ಮೂಲಕ ನಾಡಗೌಡ ಎರಡನೇ ಬಾರಿ ಕ್ಷೇತ್ರದ ಕಾಂಗ್ರೆಸ್​ ಶಾಸಕರಾಗಿದ್ದರು. ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಕೆಜೆಪಿಯ ವಿಮಲಾಬಾಯಿ ಜಗದೇವರಾವ್ ದೇಶಮುಖ 22,545 ಮರಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಈ ಚುನಾವಣೆಯಲ್ಲಿ ನಾಡಗೌಡ 12,202 ಮತಗಳ ಅಂತರದಿಂದ ಗೆದ್ದಿದ್ದರು. 18,859 ಮತಗಳನ್ನು ಪಡೆದ ಸ್ವತಂತ್ರ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.

ಈವರೆಗೆ ಗೆದ್ದ ರಾಜಕೀಯ ಪಕ್ಷಗಳು

2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥೀ ಎ.ಎಸ್. ಪಾಟೀಲ್ ನಡಹಳ್ಳಿ (ಅಮೀನಪ್ಪ ಗೌಡ ಎಸ್ ಪಾಟೀಲ್) ಗೆಲುವು ಕಂಡಿದ್ದರು. ಕಾಂಗ್ರೆಸ್​ ಅಭ್ಯರ್ಥಿ ಅಪ್ಪಾಜಿ ಚನ್ನಬಸವರಾಜ​ ಶಂಕರರಾವ್​ ನಾಡಗೌಡರನ್ನು ಸೋಲಿಸುವ ಮೂಲಕ ಕ್ಷೇತ್ರದ ಶಾಸಕರಾದರು. ನಡಹಳ್ಳಿ 63,512 ಮತಗಳನ್ನು ಗಳಿಸಿದರೆ, ನಾಡಗೌಡ 54,879 ಮತಗಳನ್ನು ಗಳಿಸಿದರು. 86,33 ಮತಗಳ ಅಂತರದಿಂದ ಪಾಟೀಲ್ ನಡಹಳ್ಳಿ ನಡಹಳ್ಳಿ ಗೆಲವು ಕಂಡರು. 9,845 ಪಡೆದ ಜೆಡಿಎಸ್​ ಅಭ್ಯರ್ಥಿ ಮಂಗಳಾದೇವಿ ಬಿರಾದಾರ್​ ಮೂರನೇ ಸ್ಥಾನ ಪಡೆದರು.

2018 ರಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು:ಎ ಎಸ್ ಪಾಟೀಲ್ ನಡಹಳ್ಳಿ ವೈಯಕ್ತಿಕ ವರ್ಚಸ್ಸು ಹೆಚ್ಚಿತ್ತು. ಹಿಂದೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾಗಿದ್ದರೂ ಮುದ್ದೇಬಿಹಾಳ ಮತಕ್ಷೇತ್ರದ ಮೇಲೆ ಒಲವು ಇಟ್ಟುಕೊಂಡಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ‌ಸೇರಿದ್ದು, ಅವರಿಗೆ ಪ್ಲಸ್ ಪಾಯಿಂಟ್ ಆಯಿತು.‌

ಪುರುಷ ಮತ್ತು ಮಹಿಳಾ ಮತದಾರರ ಮಾಹಿತಿ

1967ರ ಚುನಾವಣೆಯಿಂದ ಏಳು ಬಾರಿ ಗೆದ್ದ ಕಾಂಗ್ರೆಸ್​:ಕಿತ್ತೂರು-ಕರ್ನಾಟಕ ಪ್ರದೇಶಕ್ಕೆ ಒಳಪಡುವ ಈ ಕ್ಷೇತ್ರವು ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಬರುತ್ತದೆ. 2008ರಲ್ಲಿ ಮುದ್ದೇಬಿಹಾಳ ಕ್ಷೇತ್ರ ವಿಭಜನೆ ಆಯಿತು. ಸದ್ಯ ಈ ಕ್ಷೇತ್ರ ಮುದ್ದೇಬಿಹಾಳ ತಾಲೂಕು, ಮುದ್ದೇಬಿಹಾಳ, ನಾಲತವಾಡ ದಾವಲಗಿ ವೃತ್ತ ಸೇರಿದಂತೆ ಹಲವು ಪ್ರಮುಖ ನಗರಗ ಹಾಗೂ ಹಳ್ಳಿಗಳನ್ನು ಹೊಂದಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 59.29% ಮತ ಗಳಿಸಿದ್ದರೆ ಜೆಡಿಎಸ್ 33.36% ಮತಗಳನ್ನು ಗಳಿಸಿತ್ತು. 1967ರ ಚುನಾವಣೆಯಿಂದ ಈ ಕ್ಷೇತ್ರದಿಂದ ಅಪ್ಪಾಜಿ ನಾಡಗೌಡ 5 ಬಾರಿ ಸೇರಿದಂತೆ ಕಾಂಗ್ರೆಸ್​ ಒಟ್ಟು 7 ಬಾರಿ ಗೆಲುವು ಕಂಡಿದೆ. ಜೆಎನ್‌ಪಿ ಅಭ್ಯರ್ಥಿ ದೇಶುಕ್ ಜಗದೇವ್ ರಾವ್ ಸಂಗನಬಸಪ್ಪ 3 ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಜನತಾದಳ ತಲಾ 1 ಬಾರಿ ಗೆಲುವು ಕಂಡಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ 67.59 % ಮತಗಳು ಚಲಾವಣೆಯಾಗಿದ್ದರೆ 1295 ನೋಟಾ ಮತಗಳು ನಡೆದಿದ್ದು ಕ್ಷೇತ್ರದ ವೈಶಿಷ್ಟ್ಯ.

ಗೆದ್ದು ಬೀಗಿದವರು:ಹೆಚ್ಚು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ ಕಾರಣ ಇದು ಕಾಂಗ್ರೆಸ್ ಭದ್ರಕೋಟೆ ಆಗಿತ್ತು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

1967 : ಶಿವಶಂಕರಪ್ಪ ಗುರಡ್ಡಿ (ಕಾಂಗ್ರೆಸ್​)

1972 : ಎಸ್ ಎಂ ಮುರುಗೆಪ್ಪ (ಕಾಂಗ್ರೆಸ್)

1978 : ಜೆ.ಎಸ್. ದೇಶಮುಖ (ಜನತಾ ಪಾರ್ಟಿ)

1983 : ಜೆ.ಎಸ್.ದೇಶಮುಖ (ಜನತಾ ಪಾರ್ಟಿ)

1985 : ಜೆ.ಎಸ್.ದೇಶಮುಖ (ಜನತಾ ಪಾರ್ಟಿ)

1989 : ಅಪ್ಪಾಜಿ ನಾಡಗೌಡ (ಕಾಂಗ್ರೆಸ್)

1994 : ಮಿಮಲಾಬಾಯಿ ದೇಶಮುಖ (ಜನತಾದಳ)

1999 : ಅಪ್ಪಾಜಿ ನಾಡಗೌಡ (ಕಾಂಗ್ರೆಸ್)

2004 : ಅಪ್ಪಾಜಿ ನಾಡಗೌಡ (ಕಾಂಗ್ರೆಸ್)

2008 : ಅಪ್ಪಾಜಿ ನಾಡಗೌಡ (ಕಾಂಗ್ರೆಸ್)

2013 : ಅಪ್ಪಾಜಿ ನಾಡಗೌಡ (ಕಾಂಗ್ರೆಸ್)

2018 : ಎ.ಎಸ್.ಪಾಟೀಲ್​ ನಡಹಳ್ಳಿ (ಬಿಜೆಪಿ)

ಈಡೇರದ ಭರವಸೆಗಳು:ಹಾಲಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ‌ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ವಿರೋಧಿ ಅಲೆ ಇದ್ದೇ ಇದೆ. ಮತಕ್ಷೇತ್ರದ ‌ಕೆಲ ಗ್ರಾಮೀಣ ಭಾಗದಲ್ಲಿ‌ ಜಮೀನುಗಳಿಗೆ ಹೋಗಲು ಸುಸಜ್ಜಿತ‌ ರಸ್ತೆಗಳಿಲ್ಲ. ಕೆಲವೆಡೆ ನೀರಿನ ಸಮಸ್ಯೆ ಇದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳು ಹಾಗೇ ಇವೆ. ಚುನಾವಣೆಯಲ್ಲಿ‌ ಸೋತ ಬಳಿಕವಂತೂ ಮಾಜಿ ಸಚಿವ ಅಪ್ಪಾಜಿ ನಾಡಗೌಡ ನಿರಂತರವಾಗಿ ಮತಕ್ಷೇತ್ರದಲ್ಲಿ ಓಡಾಟ ಮಾಡಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ.‌ ಜೆಡಿಎಸ್‌ ಅಭ್ಯರ್ಥಿ‌ ಚನ್ನಬಸಪ್ಪ ‌ಸೋಲಾಪುರ ರಾಜಕೀಯದಲ್ಲಿ ಅನುಭವ ಹೊಂದಿದ್ದಾರೆ. ಆದರೆ ಇದು‌ ಎಷ್ಟರ‌ ಮಟ್ಟಿಗೆ ಮತವಾಗಿ ಪರಿವರ್ತನೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ:ಗೆಲುವು ಕಷ್ಟವಾಗಿರುವ ಕಾರಣ ಪ್ರಚಾರಕ್ಕೆ ಬಿಜೆಪಿ ಸಿನಿಮಾ ನಟರನ್ನು ಕರೆಸುತ್ತಿದೆ: ಹೆಚ್.ಡಿ. ಕುಮಾರಸ್ವಾಮಿ

Last Updated : Apr 5, 2023, 9:02 PM IST

ABOUT THE AUTHOR

...view details