ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಕ್ಷೇತ್ರ ಮಂಗಳೂರು. ಹೆಸರಿಗೆ ಮಂಗಳೂರು ಕ್ಷೇತ್ರವಾದರೂ ಇದು ನೈಜವಾಗಿ ಮಂಗಳೂರು ನಗರದಿಂದ ಹೊರಗಿದೆ. ಉಳ್ಳಾಲ ಕ್ಷೇತ್ರವೆಂದೇ ಜನಜನಿತವಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರವೇ ಮಂಗಳೂರು.
ಇಲ್ಲಿ ಕಾಂಗ್ರೆಸ್ ಈ ಬಾರಿಯೂ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರಿಗೆ ಟಿಕೆಟ್ ಘೋಷಿಸಿದೆ. ಖಾದರ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂಬುದಿನ್ನೂ ಘೋಷಣೆ ಆಗಿಲ್ಲ. ಎಸ್ಡಿಪಿಐ ರಿಯಾಜ್ ಫರಂಗಿಪೇಟೆ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಮಂಗಳೂರು ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್. ಆದರೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧಿಕಾರಕ್ಕಾಗಿ ಸಮಬಲದ ಪೈಪೋಟಿ ಇದ್ದೇ ಇದೆ.
ಕ್ಷೇತ್ರದ ರಾಜಕೀಯ ಇತಿಹಾಸ: ಮಂಗಳೂರು-2 ಎಂಬ ಹೆಸರಿನಲ್ಲಿದ್ದ ಕ್ಷೇತ್ರ 1978ರಲ್ಲಿ ಉಳ್ಳಾಲ ಕ್ಷೇತ್ರವಾಗಿ ಬದಲಾಯಿತು. 2008ರಲ್ಲಿ ಮಂಗಳೂರು ಕ್ಷೇತ್ರವೆಂದು ನಾಮಕರಣವಾಯಿತು. ಆದರೆ, ಜನರ ಬಾಯಲ್ಲಿ ಈಗಲೂ ಇದು ಉಳ್ಳಾಲ ಕ್ಷೇತ್ರವೇ ಆಗಿದೆ. ಕಾಂಗ್ರೆಸ್‌ನ ಯು.ಟಿ.ಫರೀದ್ 4 ಬಾರಿ, ಕವಿ ಬಿ.ಎಂ. ಇದಿನಬ್ಬ 3 ಬಾರಿ ಪ್ರತಿನಿಧಿಸಿದ್ದಾರೆ. ಕಮ್ಯುನಿಸ್ಟ್ ಎರಡು ಬಾರಿ ಹಾಗೂ ಬಿಜೆಪಿ ಒಂದು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಶಾಸಕರಾಗಿದ್ದ ಯು.ಟಿ.ಫರೀದ್ ಅವರ ನಿಧನದ ಬಳಿಕ 2007ರಲ್ಲಿ ನಡೆದ ಈ ಕ್ಷೇತ್ರದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಯು.ಟಿ.ಫರೀದ್ ಅವರ ಪುತ್ರ ಯು.ಟಿ. ಖಾದರ್ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಬಳಿಕ ಸತತ ಮೂರು ಜಯ ಸಾಧಿಸಿದ ಯು.ಟಿ. ಖಾದರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ, ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ವಿಧಾನಸಭೆ ವಿಪಕ್ಷದ ಉಪನಾಯಕರಾಗಿದ್ದಾರೆ.
1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಜಾನನ ಪಂಡಿತ್ ಗೆದ್ದು ಮಂಗಳೂರು -2 ಕ್ಷೇತ್ರದ ಪ್ರಥಮ ಶಾಸಕರಾದರು. 1962ರಲ್ಲಿ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಎ. ಕೃಷ್ಣ ಶೆಟ್ಟಿ ಗೆಲುವು ಸಾಧಿಸಿದರು. 1967ರಲ್ಲಿ ಕಾಂಗ್ರೆಸ್‌ನಿಂದ ಕವಿ ಬಿ.ಎಂ. ಇದಿನಬ್ಬ ಗೆಲುವು ಸಾಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಮುಂದಿನ ಅವಧಿಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. 16 ವರ್ಷಗಳ ಬಳಿಕ ಅಂದರೆ 1985ರಲ್ಲಿ ಮತ್ತೆ ಗೆದ್ದ ಇದಿನಬ್ಬ 1989 ರಲ್ಲಿ 3ನೇ ಬಾರಿ ಶಾಸಕರಾದರು. 1972ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಯು.ಟಿ. ಫರೀದ್ ಜಯ ದಾಖಲಿಸಿದರು. 1978ರಲ್ಲಿ ಮಂಗಳೂರು -2 ಕ್ಷೇತ್ರ ಉಳ್ಳಾಲ ಕ್ಷೇತ್ರವಾಗಿ ಪರಿವರ್ತನೆಯಾದಾಗಲೂ ಯು.ಟಿ. ಫರೀದ್ ಅವರಿಗೆ ಗೆಲುವು ಸಿಕ್ಕಿತು.
1983 ಉಳ್ಳಾಲದಲ್ಲಿ ಸಿಪಿಎಂನ ರಾಮಚಂದ್ರ ರಾವ್ ಗೆದ್ದರು. 1994ರಲ್ಲಿ ಪ್ರಥಮ ಬಾರಿಗೆ ಉಳ್ಳಾಲದಲ್ಲಿ ಬಿಜೆಪಿ ಗೆದ್ದಿತು. ಕೆ. ಜಯರಾಮ ಶೆಟ್ಟಿ ವಿಧಾನಸಭೆ ಪ್ರವೇಶಿಸಿದರು. 1999 ಮತ್ತು 2004ರಲ್ಲಿ ಯು.ಟಿ. ಫರೀದ್ ಸತತ 2 ಬಾರಿ ಜಯ ದಾಖಲಿಸಿ, ಶಾಸಕರಾಗಿರುವಾಗಲೇ ನಿಧನರಾದರು. 2007ರ ಉಳ್ಳಾಲ ಉಪ ಚುನಾವಣೆಯಲ್ಲಿ ಗೆದ್ದ ಅವರ ಪುತ್ರ ಯು.ಟಿ. ಖಾದರ್ , 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ರಚನೆಯಾದ ಮಂಗಳೂರು ಕ್ಷೇತ್ರದಲ್ಲೂ ಜಯ ದಾಖಲಿಸಿದರು. 2013ರಲ್ಲಿ ಮತ್ತೆ ಗೆದ್ದ ಖಾದರ್ ಸತತ ಮೂರನೇ ಬಾರಿ ಶಾಸಕರಾದರು. 2018 ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡರೂ ಮಂಗಳೂರು ಕ್ಷೇತ್ರವನ್ನು ಯು.ಟಿ. ಖಾದರ್ ಉಳಿಸಿಕೊಂಡರು.