ಬೆಂಗಳೂರು: ವಿಮಾನದಲ್ಲಿ ರಾಜಧಾನಿಗೆ ಬಂದು ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಶುಭಂಕರ್ ಶಿಲ್, ಹರಿದಾಸ್, ಸುಮನ್, ಗೌತಮ್, ರಾಮೇಂದ್ರನಾಥ್ ಸೇರಿ ಆರು ಮಂದಿಯನ್ನು ಬಂಧಿಸಿ, 27 ಲಕ್ಷ ಮೌಲ್ಯದ 452 ಗ್ರಾಂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾಡುವುದಕ್ಕಾಗಿಯೇ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಖದೀಮರು, ಮಾಲೀಕರಿಗೆ ಮುಂಗಡ ಹಣ ನೀಡಿ ಕೆಲದಿನಗಳ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಗಲಿನಲ್ಲಿ ನಗರದೆಲ್ಲೆಡೆ ಸುತ್ತಾಡಿ, ಬೀಗಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ವ್ಯವಸ್ಥಿತವಾಗಿ ಸಂಚು ರೂಪಿಸಿ, ಮನೆ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದರು. ಬಳಿಕ ರೈಲಿನಲ್ಲಿ ಪಶ್ವಿಮ ಬಂಗಾಳಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣವನ್ನು ಪಶ್ಚಿಮ ಬಂಗಾಳದಲ್ಲಿ ಆರೋಪಿ ರಾಮೇಂದ್ರನಾಥ್ಗೆ ಮಾರಾಟ ಮಾಡಿ, ಹಣ ಸಂಪಾದನೆ ಮಾಡುತ್ತಿದ್ದರು. ಅಲ್ಲದೇ, ಚಿನ್ನಾಭರಣ ಸ್ವೀಕರಿಸುತ್ತಿದ್ದ ರಾಮೇಂದ್ರನಾಥ್ ಆರೋಪಿಗಳಿಗೆ ಫೆನಾನ್ಸ್ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.