ಉಳ್ಳಾಲ(ದಕ್ಷಿಣ ಕನ್ನಡ): ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಬಡಕಬೈಲು ಮಹಮ್ಮದ್ ಬಿ.ಮೋನು ಮತ್ತು ಮುನ್ಝಿಯಾ ದಂಪತಿಯ ಪುತ್ರಿ ಆಯಿಷಾ ವಹಿಬಾ (11) ಮೃತಪಟ್ಟ ವಿದ್ಯಾರ್ಥಿನಿ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ, ಎದುರಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ, ಆಯಿಷಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ರಿಕ್ಷಾದಲ್ಲಿದ್ದ ಇತರ ನಾಲ್ವರು ವಿದ್ಯಾರ್ಥಿಗಳು ಹಾಗೂ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್ಚಂದ್ರ ಬೋಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ರಜೆ ನೀಡಲಾಗಿದೆ.