ಬೆಂಗಳೂರು: ವಿದ್ಯುಚ್ಛಾಲಿತ ಮೊಬಿಲಿಟಿ ವಲಯದ ಪ್ರಮುಖ ಕಂಪನಿ ಒಮೇಗಾ ಸೀಕಿ, ಎಕ್ಸ್ಪೋನೆಂಟ್ ಎನರ್ಜಿ ಸಹಯೋಗದಲ್ಲಿ ಸೋಮವಾರ ಒಮೇಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಕ್ವಿಕ್ ಎಲೆಕ್ಟ್ರಿಕ್ 3-ವ್ಹೀಲರ್ ಪ್ಯಾಸೆಂಜರ್ ವಾಹನಗಳನ್ನು ಲೋಕಾರ್ಪಣೆಗೊಳಿಸಿತು.
ಈ ಸಂದರ್ಭದಲ್ಲಿ ಒಮೇಗಾ ಸೀಕಿ ಮೊಬಿಲಿಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಉದಯ್ ನಾರಂಗ್ ಮಾತನಾಡಿ, "ಒ.ಎಸ್.ಎಂ. ಸ್ಟ್ರೀಮ್ ಸಿಟಿ ಕ್ವಿಕ್ ಪ್ಯಾಸೆಂಜರ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಉಜ್ವಲ ಶಕ್ತಿ ಮತ್ತು ಸುಸ್ಥಿರತೆ ಬದ್ಧತೆಗೆ ಖ್ಯಾತಿ ಪಡೆದ ಬೆಂಗಳೂರು ನಗರದಲ್ಲಿ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಇದು ನಗರ ಸಾರಿಗೆಯನ್ನು ಪರಿಸರ-ಸ್ನೇಹಿ ಪರಿಹಾರಗಳ ಮೂಲಕ ಕ್ರಾಂತಿಕಾರಕಗೊಳಿಸುವ ನಮ್ಮ ಧ್ಯೇಯೋದ್ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಗಮನಾರ್ಹ ಹೆಜ್ಜೆಯಾಗಿದೆ" ಎಂದರು.
"ನಮ್ಮ ವಾಹನವನ್ನು ನಗರದ ವೈವಿಧ್ಯಮಯ ಸಾರಿಗೆ ಕ್ಷೇತ್ರವನ್ನು ದೃಷ್ಟಿಯಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದ್ದು, ಹೊಗೆ ಹೊರ ಸೂಸುವಿಕೆಯಲ್ಲಿ ಮತ್ತು ಕಾರ್ಯ ನಿರ್ವಹಣೆಯ ವೆಚ್ಚಗಳಲ್ಲಿ ಗಮನಾರ್ಹ ಕಡಿತ ತರಲಾಗಿದೆ. ಹಸಿರು ಆವಿಷ್ಕಾರದಲ್ಲಿ ಸಿಲಿಕಾನ್ ಸಿಟಿಯ ನಾಯಕತ್ವ ಸ್ಥಾನವನ್ನು ಮತ್ತಷ್ಟು ದೃಢೀಕರಿಸಿದಂತಾಗಿದೆ. ಈ ವಾಹನದ ಬಿಡುಗಡೆ ಚಾಲಕರಿಗೆ ಬದಲಾವಣೆಯ ಸೂಚನೆಯಾಗಿದ್ದು, ಅವರ ಗಳಿಕೆಯ ಸಾಮರ್ಥ್ಯವನ್ನು ಕನಿಷ್ಠ ಶೇ.30ರಷ್ಟು ಹೆಚ್ಚಿಸಲಿದೆ. ಇದು ಅವರ ಜೀವನ ವ್ಯವಸ್ಥೆಯನ್ನು ಬದಲಾಯಿಸಲಿದೆ ಮತ್ತು ಆರ್ಥಿಕ ಸಬಲೀಕರಣ ಕೂಡ ವೇಗವರ್ಧಕವಾಗಲಿದೆ" ಎಂದು ಹೇಳಿದರು.
ವಿಶೇಷತೆಗಳೇನು?: ಒಮೇಗಾ ಸೀಕಿ ಮೊಬಿಲಿಟಿ ಸ್ಟ್ರೀಮ್ ಸಿಟಿ ಕ್ವಿಕ್ ವಿಶ್ವದ ಅತ್ಯಂತ ವೇಗದ ಚಾರ್ಜಿಂಗ್ನ ಎಲೆಕ್ಟ್ರಿಕ್ ಆಟೋ ಆಗಿದ್ದು, 15 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಮತ್ತು 3,24,999/- (ಎಕ್ಸ್-ಶೋರೂಂ) ಬೆಲೆ ನಿಗದಿಪಡಿಸಲಾಗಿದೆ. ಈ ವಾಹನ 2,00,000 ಕಿ.ಮೀ ಅಥವಾ 5 ವರ್ಷಗಳ ವಾರೆಂಟಿ ಹೊಂದಿದ್ದು, ಹಲವಾರು ಫೈನಾನ್ಸಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಈ ವಾಹನವು ಅತ್ಯಾಧುನಿಕ 8.8 ಕೆಡಬ್ಲ್ಯೂಎಚ್ ಪ್ರೊಪ್ರೈಟರಿ ಬ್ಯಾಟರಿ ಪ್ಯಾಕ್ ಹೊಂದಿದ್ದು, ಅದು ಪರಿಣಾಮಕಾರಿಯಾಗಿದೆ. ಎ.ಆರ್.ಎ.ಐ. ಪ್ರಮಾಣೀಕೃತ ಶ್ರೇಣಿಯಾದ ಈ ಆಟೋ 126 ಕಿಲೋಮೀಟರ್ ರೇಂಜ್ ಹೊಂದಿದೆ" ಎಂದು ಮಾಹಿತಿ ನೀಡಿದರು.
"ಒ.ಎಸ್.ಎಂ. ಸ್ಟ್ರೀಮ್ ಸಿಟಿ ಕ್ವಿಕ್ ವಾಹನ ಚಾಲಕರಲ್ಲಿ 15 ನಿಮಿಷದ ವೇಗದ ಚಾರ್ಜಿಂಗ್ ಸಾಮರ್ಥ್ಯದಿಂದ ಮಹತ್ತರ ಬದಲಾವಣೆಯ ಗುರುತು ಮೂಡಿಸಿದೆ. ಚಾಲಕರು ಟ್ರಿಪ್ಗಳ ನಡುವೆ ಚಾರ್ಜಿಂಗ್ ಸಮಯ ಕಡಿಮೆ ಮಾಡಿಕೊಳ್ಳಬಹುದಾಗಿದೆ. ನಗರದ ಯಾವುದೇ ಭಾಗದಲ್ಲಿ ಎಕ್ಸ್ಪೊನೆಂಟ್ ಚಾರ್ಜಿಂಗ್ ಜಾಲದಿಂದ ಯಾವುದೇ ಪ್ರದೇಶಕ್ಕೆ ಹೆಚ್ಚು ಕಿಲೋಮೀಟರ್ ಸಂಚರಿಸುವ ಸ್ವಾತಂತ್ರ್ಯ ಸಿಗಲಿದೆ. ಮತ್ತು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಬಹುದಾಗಿದೆ" ಎಂದು ಉದಯ್ ನಾರಂಗ್ ಹೇಳಿದರು.
ಇದನ್ನೂ ಓದಿ: ಹೊಸ ಬ್ಯಾಟರಿಗಳಿಗೆ 'ಹಳೆಯ' ಶಕ್ತಿ: ಲಿಥಿಯಂ ಮರುಬಳಕೆಗೆ ಪರಿಣಾಮಕಾರಿ ವಿಧಾನ - Approach to lithium recycling